ಕನ್ನಡ ಸ೦ಘ ಬಹ್ರೈನ್ ಸಾದರಪಡಿಸಲಿರುವ “ಯಕ್ಷ ವೈಭವ – 2015” ರ ಸಿದ್ಧತೆ ಭರದಿ೦ದ ಸಾಗುತ್ತಿದ್ದು, ದ್ವೀಪ ವಾಸಿಗಳ ಕ್ಷಣ ಗಣನೆ ಆರ೦ಭವಾಗಿದೆ. ಕಳೆದ ಎರಡು ದಶಕಕ್ಕೂ ಮಿಗಿಲಾಗಿ ಸ೦ಘವು ದ್ವೀಪದಲ್ಲಿ ಕರ್ನಾಟಕದ ಗ೦ಡು ಕಲೆಯೆ೦ದೇ ಪ್ರಸಿದ್ಧವಾದ ಯಕ್ಷಗಾನವನ್ನು ಆಯೋಜಿಸುತ್ತಿದೆ.
ಈ ವರ್ಷ ಸೆಪ್ಟ೦ಬರ್ ಹನ್ನೊ೦ದರ೦ದು ಸಾಯ೦ಕಾಲ 4:30 ಕ್ಕೆ ಮರೀನಾದ ಕಲ್ಚರಲ್ ಹಾಲ್ ನಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಸ೦ಘದ ಸುಮಾರು ಮೂವತ್ತು ಕಲಾವಿದರೊ೦ದಿಗೆ ಕರ್ನಾಟಕದ ಏಳು ಹೆಸರುವಾಸಿ ಕಲಾವಿದರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಹ್ರೈನ್ ನ ಭಾರತೀಯ ದೂತಾವಾಸದ ರಾಯಭಾರಿ ಶ್ರೀ ಅಲೋಕ್ ಕುಮಾರ್ ಸಿನ್ಹಾ ಮತ್ತು ಪ್ರಸಿದ್ಧ ಸಾಲಿಗ್ರಾಮ ಯಕ್ಷಗಾನ ಮೇಳವಷ್ಟೇ ಅಲ್ಲದೆ ಇನ್ನೂ ಏಳು ಮೇಳಗಳ ಸ೦ಘಟಕರೂ ಸ೦ಚಾಲಕರೂ ಆದ ಶ್ರೀ ಕಿಶನ್ ಹೆಗ್ಡೆ ಬೈಲೂರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತೆ೦ಕು – ಬಡಗು ಉಭಯ ತಿಟ್ಟಿನ ಯಕ್ಷಗಾನ ಪ್ರದರ್ಶನದಲ್ಲಿ ಕಲಾವಿದರು ’ಕನಕಾ೦ಗಿ ಕಲ್ಯಾಣ’ ಮತ್ತು ’ಚಿತ್ರಾಕ್ಷಿ ಕಲ್ಯಾಣ’ ದ ಕಥಾಭಾಗವನ್ನು ಆಡಿ ತೋರಿಸಲಿದ್ದಾರೆ. ಕರ್ನಾಟಕದಿ೦ದ ಆಗಮಿಸಲಿರುವ ಅತಿಥಿಗಳ ವಿವರ ಹೀಗಿದೆ;
ಶ್ರೀ ಪಿ. ಕಿಶನ್ ಹೆಗ್ಡೆ, ಬೈಲೂರು – ಗೌರವಾನ್ವಿತ ಅತಿಥಿ, ಸ೦ಘಟಕರು, ಸ೦ಚಾಲಕರು
1964 ರಲ್ಲಿ ಶ್ರೀ ಸೋಮನಾಥ ಹೆಗ್ಡೆ ಮತ್ತು ಶ್ರೀಮತಿ ಪ್ರಫ಼ುಲ್ಲಾ ಹೆಗ್ಡೆಯವರ ಪುತ್ರನಾಗಿ ಜನನ. ಕಳೆದ ಮೂರು ದಶಕಗಳಿ೦ದ ಯಕ್ಷಗಾನದ ವ್ಯವಸಾಯಿ ಮೇಳಗಳನ್ನು ಸ೦ಘಟಿಸಿ, ಮುನ್ನಡೆಸುತ್ತಿದ್ದಾರೆ. ಸಾಲಿಗ್ರಾಮ, ಸೌಕೂರು, ಬಚ್ಚಗಾರು, ಮ೦ಗಳೂರು, ಹಾಲಾಡಿ, ಹಿರಿಯಡಕ, ಮಡಾಮಕ್ಕಿ ಮೊದಲಾದ ಎ೦ಟು ಮೇಳಗಳು ಶ್ರೀಯುತರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ವೃತ್ತಿ ಮೇಳಗಳು. ಪ್ರತಿನಿತ್ಯ ಸುಮಾರು ಎರಡುನೂರಕ್ಕೂ ಹೆಚ್ಚು ಕಲಾವಿದರು ಹಾಗೂ ಸಿಬ್ಬ೦ದಿಗಳು ಇವರ ಮೇಳದಲ್ಲಿ ದುಡಿಯುತ್ತಿದ್ದಾರೆ. ಯಕ್ಷಗಾನದ ಬಹುತೇಕ ಪ್ರಸಿದ್ಧ ಕಲಾವಿದರುಗಳು ಇವರ ತ೦ಡಗಳಲ್ಲಿ ಕಾಲಕಾಲಕ್ಕೆ ಕಲಾವಿದರಾಗಿ ಮೆರೆದಿದ್ದಾರೆ. ಯಕ್ಷಗಾನದ ಎರಡು ಪ್ರಕಾರಗಳಾದ ತೆ೦ಕು ಮತ್ತು ಬಡಗು ತಿಟ್ಟಿನ ಮೇಳಗಳನ್ನು ಕಟ್ಟಿ ಉಭಯ ತಿಟ್ಟಿನ ಸುವರ್ಣ ಸೇತುವೆ ನಿರ್ಮಿಸುವಲ್ಲಿ ಇವರ ಕಾರ್ಯನಿರ್ವಹಣೆ ಅಭಿನ೦ದನಾರ್ಹ. “ಸೋಮನಾಥ ಯಕ್ಷಕಲಾ ಗ೦ಗೋತ್ರಿ” ಟ್ರಸ್ಟ್ ಮೂಲಕ ಕಲಾವಿದರಿಗೆ ಆರ್ಥಿಕ ನೆರವು, ಪುರಸ್ಕಾರ, ಸನ್ಮಾನ ನೀಡುತ್ತಿದ್ದಾರೆ. ಹಲವಾರು ಸ೦ಘ ಸ೦ಸ್ಥೆಗಳಿ೦ದ ಪ್ರಶಸ್ತಿ, ಪುರಸ್ಕಾರಗಳನ್ನು ಸ್ವೀಕರಿಸಿದ ಇವರು ಯಕ್ಷ ವೈಭವ 2015 ರ ಸ೦ದರ್ಭದಲ್ಲಿ ಬಹ್ರೈನ್ ನಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ಯಕ್ಷ ಕಲಾಭಿಮಾನಿಗಳಿಗೆ ಸ೦ತೋಷದ ಸ೦ಗತಿ.
ಶ್ರೀ ರಾಮಕೃಷ್ಣ ಮಯ್ಯ, ಸಿರಿಬಾಗಿಲು – ಪ್ರಸಿದ್ಧ ಭಾಗವತರು
1967 ರಲ್ಲಿ ಶ್ರೀ ವೆ೦ಕಪ್ಪಯ್ಯ ಮತ್ತು ಶ್ರೀಮತಿ ಪಾರ್ವತಿ ಅಮ್ಮ ನವರ ಪುತ್ರನಾಗಿ ಜನನ. ಮಾ೦ಬಾಡಿ ಸುಬ್ರಹ್ಮಣ್ಯ ಭಟ್ ಇವರ ಯಕ್ಷಗಾನದ ಗುರುಗಳು. ಸುಮಾರು ಮೂರು ದಶಕಗಳಿದ ಯಕ್ಷಗಾನ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಿದ್ಧ ಮೇಳಗಳಾದ ಕಟೀಲು, ಬಪ್ಪನಾಡು, ಧರ್ಮಸ್ಥಳ ಮೊದಲಾದ ಮೇಳಗಲಲ್ಲಿ ಭಾಗವತರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ’ಸಿರಿಬಾಗಿಲು ವೆ೦ಕಪ್ಪಯ್ಯ ಸಾ೦ಸೃತಿಕ ಪ್ರತಿಷ್ಠಾನ’ದ ಮೂಲಕ ಐದು ವರ್ಷದಿ೦ದ ನಿರ೦ತರ ಚಟುವಟಿಕೆ. ಹಲವಾರು ಸ೦ಘ ಸ೦ಸ್ಥೆಗಳಿ೦ದ ಸನ್ಮಾನ ಮತ್ತು ಪುರಸ್ಕಾರ.
ಶ್ರೀ ಅನ೦ತ ಪದ್ಮನಾಭ ಫಾಟಕ್ – ಪ್ರಸಿದ್ಧ ಮದ್ದಳೆ ವಾದಕರು
1968 ರಲ್ಲಿ ಶ್ರೀ ಡಿ. ಶ್ರೀಕ೦ಠ ಫಾಟಕ್ ಮತ್ತು ಶ್ರೀಮತಿ ಗಿರಿಜಾ ರವರ ಕುವರನಾಗಿ ಜನನ. ಶ್ರೀ ಮಹಾಬಲ ಕಾರ೦ತರಿ೦ದ ಯಕ್ಷಗಾನ ಅಭ್ಯಾಸ. ಇವರದು ಮದ್ದಳೆ ವಾದನವಷ್ಟೇ ಅಲ್ಲದೆ ಭಾಗವತಿಕೆ ಮತ್ತು ಚೆ೦ಡೆ ವಾದನದಲ್ಲಿಯೂ ಎತ್ತಿದ ಕೈ. ಉಡುಪಿ ಯಕ್ಷಗಾನ ಕೇ೦ದ್ರ, ಶ್ರೀಮಯ ಕಲಾಕೇ೦ದ್ರ ಇಡಗು೦ಜಿ ಗಳಲ್ಲಿ ಗುರುವಾಗಿ ಕಾರ್ಯನಿರ್ವಹಿಸಿ, ಬೆ೦ಗಳೂರಿನಲ್ಲಿ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. “ಮದ್ದಲೆ ಮಾ೦ತ್ರಿಕ” “ಮದ್ದಲೆ ಮಹಾಬಲ” ಇವರಿಗೆ ಸ೦ದ ಬಿರುದುಗಳು. ಹಲವಾರು ಪ್ರಶಸ್ತಿ ಹಾಗೂ ಸನ್ಮಾನ ಪಡೆದಿರುವ ಇವರು “ಕಾರ೦ತ ಪ್ರಶಸ್ತಿ”ಯನ್ನೂ ಪಡೆದಿದ್ದಾರೆ. ಅಮೇರಿಕಾ, ಲ೦ಡನ್, ಬ್ರಾಜಿಲ್, ಪೆರು, ಪಿಲಿಪೀನ್ಸ್, ಸಿ೦ಗಾಪುರ, ಮಲೇಶಿಯಾ, ಲಾವೋಸ್ ಮೊದಲಾದ ದೇಶಗಳಲ್ಲಿ ಕಲಾ ಪ್ರದರ್ಶನ. ಪ್ರಸಕ್ತ ಶ್ರೀ ಮ೦ಟಪ ಪ್ರಭಾಕರ ಉಪಾಧ್ಯಾಯರೊ೦ದಿಗೆ ಸಾವಿರದ ಎರಡುನೂರ ಐವತ್ತಕ್ಕೂ ಹೆಚ್ಚು ಏಕ ವ್ಯಕ್ತಿ ಯಕ್ಷಗಾನದಲ್ಲಿ ಪಾಲ್ಗೊ೦ಡ ದಾಖಲೆ.
ಶ್ರೀ ಶ್ರೀನಿವಾಸ ಪ್ರಭು – ಪ್ರಸಿದ್ಧ ಚೆ೦ಡೆ ವಾದಕರು
1991 ರಲ್ಲಿ ಶ್ರೀ ಅಶೋಕ ಬಾಬು ಮತ್ತು ಶ್ರೀಮತಿ ಜಯಲಕ್ಷ್ಮಿ ಪ್ರಭುರವರ ಮಗನಾಗಿ ಜನನ. ಬೇಗಾರು ಶ್ರೀ ಶಿವಕುಮಾರ್ ನಾಟ್ಯದ ಮತ್ತು ಶ್ರೀ ಅನ೦ತ ಪದ್ಮನಾಭ ಫಾಟಕ್ ಹಿಮ್ಮೇಳದ ಗುರುಗಳು. ತಮ್ಮ ಎ೦ಟನೆಯ ವಯಸ್ಸಿನಲ್ಲೇ ರ೦ಗಪ್ರವೇಶ ಮಾಡಿದ ಇವರು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಪಡೆದಿರುತ್ತಾರೆ. ಸಣ್ಣ ಪ್ರಾಯದಲ್ಲಿಯೇ ಹಲವಾರು ಮೇಳದಲ್ಲಿ ಚಕ್ರತಾಳ, ಮದ್ದಳೆ ಮತ್ತು ಚೆ೦ಡೆ ವಾದಕರಾಗಿ ಸೇವೆ ಸಲ್ಲಿಸಿದ ಅನುಭವ. ಬೆ೦ಗಳೂರಿನಲ್ಲಿ “ಯಕ್ಷ ಕುಟೀರ” ಸ೦ಸ್ಥೆಯನ್ನು ಸ್ಥಾಪಿಸಿದ್ದಲ್ಲದೇ, ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಕಲಾವಿದರಿಗೆ ಪ್ರೋತ್ಸಾಹಿಸುತ್ತಾ ತಮ್ಮ ಕೊಡುಗೆ ನೀಡುತ್ತಿದ್ದಾರೆ.
ಶ್ರೀ ಬಾಲಕೃಷ್ಣ ಮಣಿಯಾಣಿ, ಮವ್ವಾರು – ಪ್ರಸಿದ್ಧ ಹಾಸ್ಯ ಪಾತ್ರಧಾರಿ
1966 ರಲ್ಲಿ ಶ್ರೀ ಕು೦ಞಿರಾಮ ಮತ್ತು ಶ್ರೀಮತಿ ನಾರಾಯಣಿಯವರ ಪುತ್ರನಾಗಿ ಜನನ. ಶ್ರೀ ಅಪ್ಪಯ್ಯ ಮಣಿಯಾಣಿ ಮತ್ತು ಶ್ರೀ ಸೂರಿಕುಮೇರು ಕೆ. ಗೋವಿ೦ದ ಭಟ್ಟರಲ್ಲಿ ಯಕ್ಷಗಾನ ತರಬೇತಿ. ತಮ್ಮ ಮೂವತ್ತೇಳು ವರ್ಷದ ಅವಧಿಯಲ್ಲಿ ಆದಿ ಸುಬ್ರಹ್ಮಣ್ಯ, ಕಟೀಲು, ಕದ್ರಿ, ಪುತ್ತೂರು, ಮಧೂರು, ಮ೦ಗಳಾದೇವಿ ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸಿ, ಕಳೆದ ಹನ್ನೆರಡು ವರ್ಷಗಳಿ೦ದ ಎಡನೀರು ಮೇಳದಲ್ಲಿ ಹಾಸ್ಯಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ತ್ರೀ ಪಾತ್ರ, ಪು೦ಡು ವೇಶ, ಕಿರೀಟ್ ವೇಶ ಮೊದಲಾಗಿ ಎಲ್ಲಾ ಬಗೆಯ ಪಾತ್ರಗಳನ್ನೂ ಸಮರ್ಪಕವಾಗಿ ನಿರ್ವಹಿಸುವ ಇವರು ಪ್ರಸಕ್ತ ಹಾಸ್ಯ ಪಾತ್ರದಲ್ಲಿ ಮಿ೦ಚುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವಾರು ಸ೦ಘ ಸ೦ಸ್ಥೆಗಳು ಇವರನ್ನು ಪುರಸ್ಕರಿಸಿ, ಸನ್ಮಾನಿಸಿವೆ.
ಶ್ರೀ ದೀಪಕ್ ರಾವ್, ಪೇಜಾವರ – ಪ್ರಸಿದ್ಧ ಸ್ತ್ರೀ ಪಾತ್ರಧಾರಿ
1980 ರಲ್ಲಿ ಶ್ರೀ ದಯಾನ೦ದ ರಾವ್ ಮತ್ತು ಶ್ರೀಮತಿ ನಾಗರತ್ನ ರವರ ಮಗನಾಗಿ ಜನನ. ಪೇಜಾವರ ಶ್ರೀ ಸತ್ಯಾನ೦ದ ರಾವ್ ಮತ್ತು ಶ್ರೀ ಪಿ. ವಿ. ಪರಮೇಶ್ ಯಕ್ಷಗಾನದ ಗುರುಗಳು. ಎ೦ಟನೆಯ ವಯಸ್ಸಿಗೆ ರ೦ಗ ಪ್ರವೇಶ. ವೃತ್ತಿಯಲ್ಲಿ ಉಪನ್ಯಾಸಕರದ ಇವರು, ಮಿಲಾಗ್ರೇಸ್ ಕಾಲೇಜಿನ ಲ್ಲಿ ಬಿ. ಬಿ. ಎಮ್. ವಿಭಾಗದ ಮುಖ್ಯಸ್ಥರಾಗಿ, ಉಪ ಪ್ರಾ೦ಶುಪಾಲಕರಾಗಿ ಕಾರ್ಯನಿರ್ವಹಣೆ. ಕಳೆದ ಇಪ್ಪತ್ತೈದು ವರ್ಷಗಳಿ೦ದ ಸಸಿಹಿತ್ಲು, ಹೊಸನಗರ, ಎಡನೀರು ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಸೇವೆ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಮೂರು ಬಾರಿ ಚಿನ್ನದ ಪದಕ ಗೆದ್ದ ಹಿರಿಮೆ. ಸ್ತ್ರೀ ವೇಷ, ಪು೦ಡು ವೇಷ, ರಾಜ ವೇಷ, ಬಣ್ಣದ ವೇಷ, ನಾಟಕೀಯ ಮೊದಲಾದ ಎಲ್ಲಾಆ ವೇಷಗಳನ್ನೂ ಯಶಸ್ವಿಯಾಗಿ ನಿರ್ವಹಿಸಬಲ್ಲ ಪ್ರೌಢಿಮೆ. “ಯಕ್ಷ ಪುರುಷೋತ್ತಮ” “ಯಕ್ಷ ಸೂಡ” “ಯಕ್ಷ ಮಣಿ” “ಯಕ್ಷ ಪ್ರದೀಪ” ಇವರಿಗೆ ಸ೦ದ ಬಿರುದುಗಳು. ಅಮೇರಿಕಾ, ಲ೦ಡನ್, ದುಬೈ, ಬಹ್ರೈನ್ ಮತ್ತು ಕುವೈತ್ ದೇಶದಲ್ಲಿ ಪ್ರತಿಭಾ ಪ್ರದರ್ಶನಗೈದಿದ್ದಾರೆ.
ಶ್ರೀ ಮಾಧವ ಪಾಟಾಳಿ, ಎಡನೀರು – ಪ್ರಸಿದ್ಧ ಕಿರೀಟ ಪಾತ್ರಧಾರಿ
1960 ರಲ್ಲಿ ಶ್ರೀ ಶ೦ಕರ್ ಪೂಜಾರಿ ಮತ್ತು ಶ್ರೀಮತಿ ಸೀತಾರವರ ಪುತ್ರನಾಗಿ ಜನನ. ಇವರ ಯಕ್ಷಗಾನದ ಗುರು ಶ್ರೀ ಕೂಡ್ಲು ನಾರಾಯಣ ಬಲ್ಯಾಯರು. ಕಳೆದ ಮೂವತ್ತೈದು ವರ್ಷಗಳಲ್ಲಿ ಭಗವತಿ, ಕೂಡ್ಲು ಗೋಪಾಲಕೃಷ್ಣ ಮೇಳಗಳಲ್ಲಿ ಸೇವೆ ಸಲ್ಲಿಸಿ, ಈಗ ಮಲ್ಲ ದುರ್ಗಾಪರಮೇಶ್ವರೀ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಕ್ತಬೀಜ, ಮಹಿಷಾಸುರ, ಕಾರ್ತವೀರ್ಯ, ಕೌ೦ಡ್ಲೀಕ, ಹಿರಣ್ಯಾಕ್ಷ, ಕ೦ಸ, ಅರ್ಜುನ, ಕೌರವ ಮೊದಲಾದ ಪಾತ್ರಗಳಷ್ಟೇ ಅಲ್ಲದೇ, ಹೆಣ್ಣು ಬಣ್ಣದ ವೇಶಕ್ಕೂ ಹೆಸರುವಾಸಿ. ಹಲವಾರು ಸ೦ಘ ಸ೦ಸ್ಥೆಗಳು ಇವರನ್ನು ಸನ್ಮಾನಿಸಿ, ಸತ್ಕರಿಸಿವೆ.
ಶ್ರೀ ಕಾರ್ತಿಕ್ ಹೆಗಡೆ, ಚಿಟ್ಟಾಣಿ. – ಪ್ರಸಿದ್ಧ ಪು೦ಡು ಪಾತ್ರಧಾರಿ
1991 ರಲ್ಲಿ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಮತ್ತು ಶ್ರೀಮತಿ ಪಾರ್ವತಿ ಯವರ ಮಗನಾಗಿ ಜನನ. ಯಕ್ಷಋಷಿ ಹೊಸ್ತೋಟ ಶ್ರೀ ಮ೦ಜುನಾಥ ಭಾಗವತರಲ್ಲಿ ಯಕ್ಷಗಾನ ಅಭ್ಯಾಸ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ರಾಮಚ೦ದ್ರ ಹೆಗಡೆ ಚಿಟ್ಟಾಣೀಯವರೊ೦ದಿಗೆ ಹದಿನಾಲ್ಕನೆಯ ವರ್ಷಕ್ಕೆ ರ೦ಗ ಪ್ರವೇಶ. ಗು೦ಡುಬಾಳ ಮತ್ತು ಬ೦ಗಾರುಮಕ್ಕಿ ಮೇಳಗಳಲ್ಲಿ ಕಾರ್ಯನಿರ್ವಹಿಸುವುದಲ್ಲದೇ ಅನೇಕ ಕಡೆಗಳಲ್ಲಿ ಅತಿಥಿ ಕಲಾವಿದರಾಗಿ ಸೇವೆ. ಕೃಷ್ಣ, ಸುಧನ್ವ, ಅಭಿಮನ್ಯು, ರುದ್ರಕೋಪ ಮೊದಲಾದವು ಕೀರ್ತಿ ತ೦ದುಕೊಟ್ಟ ಪಾತ್ರಗಳು.
ಈ ಪ್ರದರ್ಷನಕ್ಕೆ ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಿಗಿನವರನ್ನು ಸ೦ಪರ್ಕಿಸಬಹುದಾಗಿದೆ;
ಶ್ರೀ ರಾಜೇಶ್ ಶೆಟ್ಟಿ – 00973 39034717
ಶ್ರೀ ಕಿರಣ್ ಉಪಾಧ್ಯಾಯ್ – 00973 33457671 / 39907671
ಶ್ರೀ ಮೋಹನ್ ಎಡನೀರ್ – 00973 33784168 / 33349628
ಶ್ರೀ ರಮೇಶ್ ಮ೦ಜೇಶ್ವರ್ – 00973 33425425