ಲಖ್ನೋ, ಸೆ.20: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸ್ಫೋಟಗೊಂಡ ಪರಿಣಾಮ 6ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಹಲವಾರು ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖ್ನೋದ ಮೋಹನ್‍ಲಾಲ್‍ಗಂಜ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಲಖ್ನೋದ ಹೊರವಲಯದಲ್ಲಿರುವ ಮೋಹನ್‍ಲಾಲ್‍ಗಂಜ್ ಪ್ರದೇಶದಲ್ಲಿದ್ದ ಈ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ತೀವ್ರತೆ ಎಷ್ಟಿತ್ತೆಂದರೆ ಸಾವನ್ನಪ್ಪಿರುವ 6 ಮಂದಿ ಕಾರ್ಮಿಕರ ಮೃತದೇಹಗಳು ಗುರುತು ಸಿಗಲಾರದಷ್ಟು ಛಿದ್ರವಾಗಿವೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಪಟಾಕಿ ಸ್ಫೋಟಗೊಂಡ ಪರಿಣಾಮ ಅಕ್ಕಪಕ್ಕದ ಮನೆಯ ಮೇಲ್ಚಾವಣಿಗಳು ಕುಸಿದುಬಿದ್ದಿವೆ. ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಪಡೆ ದಾವಿಸಿತು. ಆದರೆ, ಈ ಜಾಗ ಕಿಷ್ಕಿಂಧೆಯಾಗಿದ್ದರಿಂದ ಪರಿಹಾರ ಕಾರ್ಯ ಕೈಗೊಳ್ಳಲು ತುಸು ವಿಳಂಬವಾಯಿತು ಎಂದು ತಿಳಿದುಬಂದಿದೆ. ಬೆಳಿಗ್ಗೆ ಕಾರ್ಮಿಕರು ಕೆಲಸ ಆರಂಭಿಸುತ್ತಿದ್ದಂತೆ ಭಾರೀ ಸ್ಫೋಟ ಸಂಭವಿಸಿತು. ಇದ್ದಕ್ಕಿದ್ದಂತೆ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡು ಭಾರೀ ಹೊಗೆ ಎದ್ದಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮೂಲಗಳ ಪ್ರಕಾರ, ಕಾರ್ಖಾನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸ್ಫೋಟಗೊಂಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.