ನವದೆಹಲಿ/ಮುಂಬೈ (ಪಿಟಿಐ): ‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ೨8೮ ಸ್ಥಾನಗಳ ಪೈಕಿ ಬಿಜೆಪಿಗೆ ೧೧೯ ಸ್ಥಾನಗಳಿಗಿಂತ ಹೆಚ್ಚಿಗೆ ಕೊಡುವ ಮಾತೇ ಇಲ್ಲ’ ಎಂದು ಶಿವಸೇನಾ ಭಾನುವಾರ ಕಡ್ಡಿಮುರಿದಂತೆ ಹೇಳಿದೆ.
ಇದರಿಂದ ಬಿಜೆಪಿ ಮತ್ತು ಶಿವಸೇನಾ ನಡುವಿನ ಎರಡೂವರೆ ದಶಕಗಳ ಮೈತ್ರಿ ಮುರಿದು ಬೀಳುವ ಹಂತಕ್ಕೆ ಬಂದಿದೆ. ಬಿಕ್ಕಟ್ಟು ಶಮನಕ್ಕೆ ಬಿಜೆಪಿ ಕಸರತ್ತು ನಡೆಸಿದ್ದು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾನುವಾರ ರಾತ್ರಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಲಾಯಿತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಗೃಹ ಸಚಿವ ರಾಜನಾಥ್ ಸಿಂಗ್ ಕೂಡ ಸಭೆಯಲ್ಲಿ ಇದ್ದರು. ಮಹಾರಾಷ್ಟ್ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್‌್ ೨೭ ಕೊನೆಯ ದಿನವಾಗಿರುವುದರಿಂದ ಸ್ಥಾನ ಹೊಂದಾಣಿಕೆ ಕುರಿತು ಬೇಗ ನಿರ್ಧಾರಕ್ಕೆ ಬರುವುದು ಎರಡೂ ಪಕ್ಷಗಳಿಗೂ ಅನಿವಾರ್ಯವಾಗಿದೆ.
ಭಾನುವಾರದ ಬೆಳವಣಿಗೆ: ಸ್ಥಾನ ಹೊಂದಾಣಿಕೆ ಕುರಿತು ವಾರವಿಡೀ ನಡೆದ ರಾಜಕೀಯ ಕಸರತ್ತಿಗೆ ತೆರೆ ಎಳೆಯುವಂತೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ಬಿಜೆಪಿಗೆ ೧೧೯ ಸ್ಥಾನಗಳಿಂತ ಹೆಚ್ಚಿನದನ್ನು ಕೊಡಲಾಗದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಚೌಕಾಸಿ ಮಾಡುತ್ತಿರುವ ಠಾಕ್ರೆ ಅವರು ಮೋದಿ ಅವರ ಮನವೊಲಿಕೆಗೂ ಮುಂದಾಗಿದ್ದಾರೆ.
ಮುಂಬೈನಲ್ಲಿ ಭಾನುವಾರ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್, ‘ಗುಜರಾತ್‌ನಲ್ಲಿ ೨೦೦೨ರಲ್ಲಿ ನಡೆದ ಗಲಭೆ ಬಳಿಕ ಅಂದಿನ ಮುಖ್ಯಮಂತ್ರಿ ಮೋದಿ ಅವರ ಪದಚ್ಯುತಿಗೆ ಎಲ್ಲರೂ ಒತ್ತಡ ಹಾಕಿದ್ದರು. ಆಗ ಶಿವಸೇನಾ ವರಿಷ್ಠ ಬಾಳಾ ಠಾಕ್ರೆ ಮಾತ್ರ ಮೋದಿ ಬೆಂಬಲಕ್ಕೆ ನಿಂತಿದ್ದರು’ ಎನ್ನುವುದನ್ನು ನೆನಪಿಸಿದರು.
ಠಾಕ್ರೆ ಹೇಳಿದ್ದು: ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ೨೭೨ ಗುರಿ ತಲುಪಲು ಶಿವಸೇನಾ ಅಡ್ಡಗಾಲು ಹಾಕಿಲ್ಲ. ಹಾಗೆಯೇ ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನಾದ ೧೫೦ರ ಗುರಿ ಸಾಧಿಸಲು ಬಿಜೆಪಿ ನೆರವಾಗಬೇಕು. ‘ನಾವು ಮೊದಲು ೧೬೦ ಸ್ಥಾನಗಳನ್ನು ಕೇಳಿದ್ದೆವು. ಈಗ ೯ ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧ. ನಾವು ೧೫೧ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ಬಿಜೆಪಿ ೧೧೯
ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಳಿದ ೧೮ ಸ್ಥಾನಗಳನ್ನು ನಮ್ಮ ಮಿತ್ರಪಕ್ಷಗಳಿಗೆ ಕೊಡುತ್ತೇವೆ’ ಎಂದು ಠಾಕ್ರೆ ಹೇಳಿದರು.
ಜಂಟಿ ಹೊಣೆ: ಠಾಕ್ರೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ, ‘ಮೈತ್ರಿ ಮುಂದುವರಿಸಿಕೊಂಡು ಹೋಗುವುದು ಎರಡೂ ಪಕ್ಷಗಳ ಕರ್ತವ್ಯ. ಮಾಧ್ಯಮಗಳ ಮುಖಾಂತರ ಹೇಳಿಕೆ ಕೊಡುವುದರ ಬದಲು ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು’ ಎಂದಿದೆ.
‘ಶಿವಸೇನಾ ೩೫ ಹಾಗೂ ನಾವು ೧೯ ಸ್ಥಾನಗಳನ್ನು 25 ವರ್ಷಗಳಿಂದ ಕಳೆದುಕೊಳ್ಳುತ್ತ ಬಂದಿದ್ದೇವೆ. ತಾನು ಗೆಲ್ಲದ ಸ್ಥಾನಗಳ ಹಂಚಿಕೆಗೆ ಸಂಬಂಧಿಸಿ ಸೇನಾ ಮರು ಚಿಂತನೆ ನಡೆಸಬೇಕು. ಇಲ್ಲದಿದ್ದರೆ ಆ ಎಲ್ಲ ಸ್ಥಾನಗಳನ್ನು ಎನ್‌ಸಿಪಿ– ಕಾಂಗ್ರೆಸ್ ಮೈತ್ರಿಕೂಟಕ್ಕೆ ಉಡುಗೊರೆಯಾಗಿ ಕೊಟ್ಟಂತೆ ಆಗುತ್ತದೆ’ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕರಾದ ಏಕನಾಥ್ ಖಾಡ್ಸೆ ಹಾಗೂ ವಿನೋದ್ ತಾವ್ಡೆ ಹೇಳಿದ್ದಾರೆ.
ಈ ಮೈತ್ರಿಕೂಟ ಉಳಿಯಬೇಕು. ಮುಖ್ಯಮಂತ್ರಿ ಸ್ಥಾನ ಪಡೆಯಲು ನಾನು ಈ ಮಾತು ಹೇಳುತ್ತಿಲ್ಲ. ಹಿಂದುತ್ವಕ್ಕಾಗಿ ಈ ಮೈತ್ರಿಕೂಟ ಉಳಿಯಬೇಕು. ಮುಂದೆ ಆಗುವುದು ನನ್ನ ಹಣೆಬರಹ. ನಾವು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಯಾರಿದ್ದೇವೆ.
–ಉದ್ಧವ್ ಠಾಕ್ರೆ