ರಾಷ್ಟ್ರೀಯ

ನಕಲಿ ಎನ್‍ಕೌಂಟರ್ ಗಳಿಗೆ ಬ್ರೇಕ್ : ಪೋಲೀಸ್ ಎನ್‍ಕೌಂಟರ್ ಗಳ ಮೇಲೆ ಸುಪ್ರೀಂ ಕಣ್ಣು

Pinterest LinkedIn Tumblr

fack-encounters

ನವದೆಹಲಿ,ಸೆ.23: ದೇಶಾದ್ಯಂತ ಪೊಲೀಸ್ ಎನ್‍ಕೌಂಟರ್ ಸಾವುಗಳು ಹೆಚ್ಚುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ ಇನ್ನು ಮುಂದೆ ಎನ್‍ಕೌಂಟರ್ ನಡೆಸುವ ಸಂದರ್ಭ ವಿಡಿಯೋ ಚಿತ್ರೀಕರಣ ಮಾಡುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಆಡಳಿತ ಪ್ರದೇಶಗಳ ಪೊಲೀಸ್ ಇಲಾಖೆಗಳಿಗೆ ಮಾರ್ಗಸೂಚಿಯೊಂದನ್ನು ನೀಡಲು ನಿರ್ಧರಿಸಿದೆ.

ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಮತ್ತು ಎಚ್.ಎಸ್.ಬೇಡಿ ಅವರನ್ನೊಳಗೊಂಡ ವಿಭಾಗೀಯ ಪೀಠವೊಂದು ಈ ಕುರಿತಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ. ದೇಶದಲ್ಲಿ ಇತ್ತೀಚೆಗೆ ನಡೆದ ಅನೇಕ ನಕಲಿ ಎನ್‍ಕೌಂಟರ್‍ಗಳನ್ನು ಪ್ರಶ್ನಿಸಿ ಮುಂಬೈನ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಇಂದು ಈ ಆದೇಶವನ್ನು ನೀಡಿತು.

ಎನ್‍ಕೌಂಟರ್‍ಗಳು ನಡೆದ ಬಗ್ಗೆ ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿಗಳ ಬಗ್ಗೆಯೂ ಸೂಕ್ತ ತನಿಖೆಯ ಅಗತ್ಯವಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್ ಯಾವುದೇ ಎನ್‍ಕೌಂಟರ್ ಸಂದರ್ಭ ಮುದ್ರಣ ಅಥವಾ ವಿದುನ್ಮಾನ ಮಾಧ್ಯಮಗಳ ಮೂಲಕ ಅದನ್ನು ದಾಖಲಿಸಬೇಕು ಎಂದು ಹೇಳಿದೆ. ಯಾವುದೇ ಎನ್‍ಕೌಂಟರ್ ನಡೆದ ಬಗ್ಗೆ ದಾಖಲೆಗಳು ಕಡ್ಡಾಯವಾಗಿ ನಿರ್ವಹಣೆಯಾಗಿರಬೇಕು. ಇಲಾಖೆ ಈ ಬಗ್ಗೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಎನ್‍ಕೌಂಟರ್ ಆಧಾರದ ಮೇಲೆ ಎನ್‍ಕೌಂಟರ್‍ನಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಬಡ್ತಿ ನೀಡುವ ಪ್ರಕ್ರಿಯೆ ನಿಲ್ಲಬೇಕು. ರಾಜ್ಯ ಸರ್ಕಾರಗಳು ಎನ್‍ಕೌಂಟರ್‍ನಲ್ಲಿ ಭಾಗವಹಿಸಿದ ಪೆÇಲೀಸರಿಗೆ ಯಾವುದೇ ಪ್ರಶಸ್ತಿಗಳನ್ನಾಗಲಿ, ನಗದನ್ನಾಗಲಿ ನೀಡಬಾರದು.

ಎನ್‍ಕೌಂಟರ್ ಕುರಿತಂತೆ ಸತ್ಯಾಸತ್ಯತೆಗಳನ್ನು ಪರಿಷ್ಕರಿಸಿ ನಂತರವೇ ಅಧಿಕಾರಿಗಳಿಗೆ ಬಡ್ತಿ, ಪ್ರಶಸ್ತಿ ಸೇರಿದಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ರಾಜ್ಯಗಳಲ್ಲಿ ಸಿಐಡಿ ಮತ್ತು ಪ್ರತ್ಯೇಕ ಪೆÇಲೀಸರು ಎನ್‍ಕೌಂಟರ್ ಬಗ್ಗೆ ತನಿಖೆ ನಡೆಸಬೇಕು. ಭಾರತೀಯ ನಾಗರಿಕ ಸಂಹಿತೆ 176ರಡಿ ಮ್ಯಾಜಿಸ್ಟೇರಿಯಲ್ ತನಿಖೆ ನಡೆಬೇಕು. ನಂತರ ಎನ್‍ಕೌಂಟರ್‍ನಲ್ಲಿ ಬಳಕೆಯಾದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಸಮಿತಿಗೆ ಒಪ್ಪಿಸಬೇಕು. ಎನ್‍ಕೌಂಟರ್ ನಡೆಸುವ ಕುರಿತಂತೆ ಕ್ರಿಮಿನಲ್ ಮಾಹಿತಿಯನ್ನು ಮೊದಲೇ ವಿವರವಾಗಿ ನೀಡಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ಹಿರಿಯ ನ್ಯಾಯವಾದಿ ಹಾಗೂ ಎಎಪಿ ಮುಖಂಡ ಪ್ರಶಾಂತ ಭೂಷಣ್ ಅವರು ಈ ಮಾರ್ಗಸೂಚಿಯ ಕರಡನ್ನು ಸಿದ್ಧಪಡಿಸಿದ್ದು, ಈ ಕರಡು ಪರೀಕ್ಷಣೆಯ ಬಳಿಕ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಮತ್ತು ಎಚ್.ಎಸ್.ಬೇಡಿ ಹೇಳಿದ್ದಾರೆ. ಮುಂಬೈ ಹೈಕೋರ್ಟ್‍ನಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಮೊದಲು ಈ ಕುರಿತಂತೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್ ಅರ್ಜಿಯನ್ನು ತಳ್ಳಿಹಾಕಿತ್ತು. ಮುಂಬೈ ಹೈಕೋರ್ಟ್‍ನ ಈ ಕ್ರಮವನ್ನು ಪ್ರಶ್ನಿಸಿ ಸಂಸ್ಥೆಯು ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಈ ಮಹತ್ವದ ತೀರ್ಮಾನ ಪ್ರಕಟಿಸಿದೆ.

Write A Comment