ಬೆಂಗಳೂರು, ಸೆ.29: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಶಿಕ್ಷೆ ಹಾಗೂ 100 ಕೋಟಿ ರೂ. ಭಾರಿ ದಂಡಕ್ಕೆ ಗುರಿಯಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ಇಂದು ರಾಜ್ಯ ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಅವರ ಮೇಲ್ಮನವಿ ಪರ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ವಕಾಲತ್ತು ವಹಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಎಐಎಡಿಎಂಕೆಯ ಹಿರಿಯ ನಾಯಕರೊಬ್ಬರು, ನಿನ್ನೆ ಹಿರಿಯ ವಕೀಲರ ಗುಂಪೆÇಂದು ಜಯಲಲಿತಾ ಅವರನ್ನು ಸಂದರ್ಶಕರ ಕೊಠಡಿಯಲ್ಲಿ ಭೇಟಿಯಾಗಿ ಜಾಮೀನು ಅರ್ಜಿ ಸಲ್ಲಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಹಿರಿಯ ವಕೀಲರು ಜಾಮೀನು ಅರ್ಜಿ ಸಲ್ಲಿಸುವ ಮುನ್ನ ತೀರ್ಪಿನ ಪ್ರತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದು, ಅದಕ್ಕಾಗಿ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರ ನೆರವನ್ನು ಪಡೆಯಲಾಗಿದೆ. ಕೆಳಹಂತದ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ತಡೆಯಾಜ್ಞೆ ಅಥವಾ ಜಯಲಲಿತಾ ಅವರ ಆರೋಗ್ಯ ಹಾಗೂ ವಯಸ್ಸಿನ ಆಧಾರದಲ್ಲಿ ಜಾಮೀನು ಪಡೆಯಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ನಡುವೆ ರಾಜ್ಯ ಹೈಕೋರ್ಟ್‍ಗೆ ಇಂದಿನಿಂದ ಅ. 6ರವರೆಗೆ ದಸರಾ ರಜೆ ಇದೆಯಾದರೂ, ಜಯಲಲಿತಾ ಪರ ವಕೀಲರು ಹೈಕೋರ್ಟ್‍ನ ರಜಾ ಪೀಠದಲ್ಲಿ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ. ಇಂದು ಸಲ್ಲಿಕೆಯಾಗುವ ಜಾಮೀನು ಅರ್ಜಿಯನ್ನು ರಜಾ ಪೀಠ ನಾಳೆ ಅಥವಾ ಗುರುವಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ವಿಶೇಷ ಅಭಿಯೋಜಕ ಜಿ.ಭವಾನಿ ಸಿಂಗ್ ಪ್ರಕಾರ, ಭ್ರಷ್ಟಾಚಾರ ಪ್ರಕರಣದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೊಳಗಾದ ಆರೋಪಿಗಳು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಎದುರು ಮಾತ್ರ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ.
ಇತಿಹಾಸ ನಿರ್ಮಿಸುವರೆ ಜೇಠ್ಮಲಾನಿ?:
ಸದಾ ವಿವಾದಾತ್ಮಕ ಪ್ರಕರಣಗಳನ್ನೇ ಕೈಗೆತ್ತಿಕೊಳ್ಳುವ ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ 100 ಕೋಟಿ ರೂ. ಮೊತ್ತದ ದಂಡ ವಿಧಿಸಿದ ವಿಶೇಷ ನ್ಯಾಯಾಲಯದ ತೀರ್ಪನ್ನು ತೀವ್ರವಾಗಿ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ರಾಮ್ ಜೇಠ್ಮಲಾನಿ ಅವರು ಜೆ.ಜಯಲಲಿತಾ ಅವರ ಮೇಲ್ಮನವಿಯ ಪರ ವಾದಿಸುವರು ಎಂಬ ವದಂತಿ ನ್ಯಾಯಾಂಗ ಹಾಗೂ ರಾಜಕೀಯ ವಲಯದಲ್ಲಿ ದಟ್ಟವಾಗಿತ್ತು. ಇದೀಗ ಎಲ್ಲ ಊಹಾಪೆÇೀಹಗಳಿಗೆ ತೆರೆ ಎಳೆದಿರುವ ರಾಮ್ ಜೇಠ್ಮಲಾನಿ, ಜೆ.ಜಯಲಲಿತಾರ ಜಾಮೀನು ಅರ್ಜಿ ಪರ ರಾಜ್ಯ ಹೈಕೋರ್ಟ್‍ನಲ್ಲಿ ವಕಾಲತ್ತು ವಹಿಸುವುದು ಬಹುತೇಕ ನಿಚ್ಚಳವಾಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರೂ.ಗಳ ಭಾರಿ ದಂಡಕ್ಕೆ ಗುರಿಯಾಗಿರುವ ಜೆ.ಜಯಲಲಿತಾ ಅವರಿಗೆ ಜಾಮೀನು ದೊರಕಿಸಿ, ಅವರನ್ನು ಒಂದೊಮ್ಮೆ ಪ್ರಕರಣದಿಂದ ಖುಲಾಸೆಗೊಳಿಸಿದರೆ ರಾಮ್ ಜೇಠ್ಮಲಾನಿ ಹೊಸದೊಂದು ಇತಿಹಾಸ ನಿರ್ಮಾಣಕ್ಕೆ ಪಾತ್ರವಾಗಲಿದ್ದಾರೆ. ಈವರೆಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಯಾವ ರಾಜಕಾರಣಿಗಳೂ ತಮ್ಮ ಆರೋಪಗಳಿಂದ ಖುಲಾಸೆಯಾಗಿರುವ ನಿದರ್ಶನಗಳಿಲ್ಲ. ಒಂದೊಮ್ಮೆ ಜೆ.ಜಯಲಲಿತಾ ಅವರು ತಮ್ಮ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ ಖುಲಾಸೆಯಾದರೆ, ಅವರಿಗೂ ರಾಜಕೀಯ ಮರುಜನ್ಮ ದೊರೆಯುವುದು ನಿಶ್ಚಿತ.