ಚೆನ್ನೈ , ಸೆ.30: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆಪಾದನೆ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಬೆಂಬಲ ಸೂಚಿಸಿ ಅಲ್ಲಿನ ಚಿತ್ರರಂಗ ಇಂದು ಸಂಪೂರ್ಣ ಬಂದ್ ಆಚರಣೆ ಮಾಡಿದೆ. ತಮಿಳುನಾಡು ಚಿತ್ರ ಪ್ರದರ್ಶಕರು, ನಿರ್ಮಾಪಕರು, ನಿರ್ದೇಶಕರು, ದಕ್ಷಿಣ ಭಾರತ ಕಲಾವಿದರ ಸಂಘ ಸೇರಿದಂತೆ ಮತ್ತಿತರ ಸಂಘಗಳು ಕರೆ ನೀಡಿದ್ದ ಚಿತ್ರರಂಗ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು.
ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಮಿಳುನಾಡಿನಾದ್ಯಂತ ಯಾವುದೇ ಚಿತ್ರಮಂದಿರದಲ್ಲೂ ಒಂದೇ ಒಂದು ಚಿತ್ರವೂ ಪ್ರದರ್ಶನ ಕಾಣಲಿಲ್ಲ. ರಾಜಧಾನಿ ಚೆನ್ನೈ , ಕೊಯಮತ್ತೂರು, ಉದಕಮಂಡಲ (ಊಟಿ), ಮಧುರೈ ಸೇರಿದಂತೆ ಎಲ್ಲೆಡೆ ಚಿತ್ರಮಂದಿರಗಳು ಬೆಳಗಿನಿಂದಲೇ ಸ್ತಬ್ಧಗೊಂಡಿದ್ದವು. ಯಾವುದೇ ರೀತಿಯ ಚಿತ್ರ ಪ್ರದರ್ಶನ ನಡೆಯಬಾರದೆಂದು ವಿತರಕರ ಸಂಘ ಮಾಡಿಕೊಂಡ ಮನವಿಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಬಂದಿತು.
ಕೆಲವು ಕಡೆ ಅಭಿಮಾನಿಗಳು ಎಂದಿನಂತೆ ಚಿತ್ರ ವೀಕ್ಷಣೆಗೆ ಬಂದಿದ್ದರು. ಆದರೆ ಮಂದಿರಗಳು ಬಂದ್ ಆದ ಹಿನ್ನೆಲೆಯಲ್ಲಿ ಬೇಸರದಿಂದ ಹಿಂತಿರುಗಿದರು. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಪೆÇಲೀಸ್ ಭದ್ರತೆ ಒದಗಿಸಲಾಗಿತ್ತು. 66 ಕೋಟಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯವು 4 ವರ್ಷ ಕಾರಾಗೃಹ ಶಿಕ್ಷೆ, 100 ಕೋಟಿ ದಂಡ ವಿಧಿಸಿತ್ತು. ನ್ಯಾಯಾಲಯದಿಂದ ಈ ತೀರ್ಪಿನಿಂದ ಜಯಲಲಿತಾ ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದರಲ್ಲದೆ, ಮುಖ್ಯಮಂತ್ರಿ ಸ್ಥಾನವು ಕೈ ತಪ್ಪಿತ್ತು. ಮುಂದಿನ 10 ವರ್ಷಗಳ ಕಾಲ ಜಯಲಲಿತಾ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.