ರಾಷ್ಟ್ರೀಯ

ಇಂದು ಸುಪ್ರೀಂ ಕೋರ್ಟ್‌ಗೆ ಜಯಲಲಿತಾ ಅರ್ಜಿ

Pinterest LinkedIn Tumblr

Jayalalithaa

ಬೆಂಗಳೂರು, ಅ.8: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾರ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಳ್ಳಿ ಹಾಕಿರುವ ಕ್ರಮವನ್ನು ಪ್ರಶ್ನಿಸಿ ನಾಳೆ(ಅ.9ರಂದು) ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ.

ಹೈಕೋರ್ಟ್ ಜಾಮೀನು ನಿರಾಕರಿಸಿದ ಆದೇಶದ ಪ್ರತಿ ಇಂದು ಬೆಳಗ್ಗೆ ಜಯಾ ಪರ ವಕೀಲರ ಕೈ ಸೇರಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರದ ಜೈಲಿಗೆ ಭೇಟಿ ನೀಡಿ ಸುಮಾರು ನಾಲ್ಕು ತಾಸುಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಹೈಕೋರ್ಟ್‌ನಲ್ಲಿ ನಡೆದಿರುವುದು ಸುಪ್ರೀಂಕೋರ್ಟ್‌ನಲ್ಲಿ ಮರುಕಳಿಸಬಾರದು ಎಂದು ಸೂಚಿಸಿರುವ ಜಯಲಲಿತಾ, ಜಾಗ್ರತೆಯಿಂದ ವಾದ ಮಂಡಿಸುವಂತೆ ವಕೀಲರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇಂದು ಸಂಜೆ ದಿಲ್ಲಿಗೆ ತೆರಳುತ್ತಿರುವ ಜಯಾ ಪರ ವಕೀಲರ ತಂಡ ನಾಳೆ ಬೆಳಗ್ಗೆ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸುವುದಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಿಕೋ ಎನ್ನುತ್ತಿರುವ ಪರಪ್ಪನ ಅಗ್ರಹಾರ: ಕಳೆದ ಹತ್ತು ದಿನಗಳಿಂದ ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜಯಾ ಅಭಿಮಾನಿಗಳು ಇಂದು ಇತ್ತ ತಲೆ ಹಾಕದಿರುವುದರಿಂದ ಪರಪ್ಪನ ಅಗ್ರಹಾರದ ಜೈಲಿನ ಸುತ್ತಮುತ್ತ ಬಿಕೋ ಎನ್ನುತ್ತಿತ್ತು. ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದರೆ ನ್ಯಾಯಾಲಯ ಜಾಮೀನು ನೀಡುತ್ತದೆ ಎಂದು ನಂಬಿದ್ದ ಅಭಿಮಾನಿಗಳು, ಪ್ರತಿ ದಿನ ತಂಡೋಪತಂಡವಾಗಿ ತಲೆ ಬೋಳಿಸಿಕೊಂಡು ಪ್ರತಿಭಟಿಸುತ್ತಿದ್ದರು. ಆದರೆ ಹೈಕೋರ್ಟ್ ಖಡಕ್ಕಾಗಿ ಅರ್ಜಿ ತಿರಸ್ಕರಿಸಿದ್ದರಿಂದಾಗಿ, ಜಾಮೀನು ಸಿಗುವುದಿಲ್ಲ ಎಂದು ಮನಗಂಡು ವೌನಕ್ಕೆ ಶರಣಾಗಿ ಸುಪ್ರೀಂ ಕೋರ್ಟ್‌ನ ಆದೇಶ ಏನಾಗುವುದು ಎಂಬುದರ ಕಡೆ ಅವರು ಮುಖ ಮಾಡಿದ್ದಾರೆ.

Write A Comment