ನವದೆಹಲಿ: ಮೊಬೈಲ್ ಸಲಕರಣೆಗಳಲ್ಲಿ ಇಂಟರ್ ನೆಟ್ ಬಳಕೆ ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿದ್ದು, ಈ ವರ್ಷಾಂತ್ಯದಲ್ಲಿ ಇಂಟರ್ ನೆಟ್ ಬಳಸುವ ಜನರ ಸಂಖ್ಯೆ ೩೦೨ ದಶಲಕ್ಷವಾಗಲಿದ್ದು, ಅಮೇರಿಕಾವನ್ನು ಹಿಂದಿಕ್ಕೆ ಭಾರತ ವಿಶ್ವದಲ್ಲಿ ಎರಡನೆ ಅತಿ ದೊಡ್ಡ ಇಂಟರ್ ನೆಟ್ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ.
ಇಂಟರ್ ನೆಟ್ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ (ಐಎಎಂಎಐ) ಮತ್ತು ಐ ಎಂ ಆರ್ ಬಿ ಪ್ರಕಾರ ಭಾರತದಲ್ಲಿ ೨೦೦ ರಿಂದ ೩೦೦ ದಶಲಕ್ಷ ಸಂಖ್ಯೆಯ ಏರಿಕೆ ಬರೀ ಒಂದು ವರ್ಷದಲ್ಲಿ ಆಗಿದ್ದು, ಇದು ೩೨% ಬೆಳೆದು ಡಿಸೆಂಬರ್ ನೊಳಗೆ ಅಮೇರಿಕಾವನ್ನು ಮೀರಿಸಲಿದೆ ಎನ್ನಲಾಗಿದೆ.
ಜುಲೈ ೨೦೧೫ ಕ್ಕೆ ಇಂಟರ್ ನೆಟ್ ಮಾರುಕಟ್ಟೆ ೩೫೪ ದಶಲಕ್ಷಕ್ಕೆ ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ.
ಸದ್ಯಕ್ಕೆ ೬೦೦ ದಶಲಕ್ಷ ಬಳಕೆದಾರರೊಂದಿಗೆ ಚೈನಾ ಮೊದಲ ಸ್ಥಾನದಲ್ಲಿದ್ದು ಅಮೇರಿಕಾ ೨೭೯ ದಶಕ್ಷ ಇಂಟರ್ ನೆಟ್ ಬಳಕೆದಾರರೊಂದಿಗೆ ಎರಡನೆ ಸ್ಥಾನದಲ್ಲಿದೆ ಮತ್ತು ಭಾರತದ್ದು ಮೂರನೆಯ ಸ್ಥಾನ.
ಗ್ರಾಮೀಣ ಭಾರತದಲ್ಲಿ ಇಂಟರ್ ನೆಟ್ ಬಳಕೆ ೩೯% ಏರುಗತಿ ಕಂಡಿದ್ದು, ಅಕ್ಟೋಬರ್ ೧೪ ಕ್ಕೆ ೧೦೧ ಮಿಲಿಯನ್ ಆಗಿದೆ. ಡಿಸೆಂಬರ್ ೨೦೧೪ ರ ಹೊತ್ತಿಗೆ ಈ ಸಂಖ್ಯೆ ೧೧೨ ಮಿಲಿಯನ್ ಆಗಲಿದ್ದು, ಜೂನ್ ೨೦೧೫ ರ ವೇಳೆಗೆ ೧೩೮ ದಶಲಕ್ಷ ಬಳಕೆದಾರರನ್ನು ಹೊಂದಿರುತ್ತದೆ.