ರಾಷ್ಟ್ರೀಯ

‘ದೇವಮಾನವ’ ಕಾರ್ಯಾಚರಣೆ: 6 ಸಾವು

Pinterest LinkedIn Tumblr

RAMPAL1WEB

ಬರ್‌ವಾಲಾ/ಹರಿಯಾಣ (ಪಿಟಿಐ): ‘ಸ್ವಯಂಘೋಷಿತ ದೇವಮಾನವ’ ರಾಮ್‌ಪಾಲ್‌ ಅವರನ್ನು ಬಂಧಿಸಲು ಪೊಲೀಸರು ಹಿಸ್ಸಾರ್‌ನಲ್ಲಿರುವ ಅವರ ಸತ್‌ಲೋಕ್‌ ಆಶ್ರಮದ ಬಳಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಬುಧವಾರ ಆರು ಮಂದಿ ಮೃತಪಟ್ಟಿದ್ದಾರೆ.

ಕಾರ್ಯಾಚರಣೆ ಮಂಗಳವಾರ ಬೆಳಿಗ್ಗೆಯಿಂದ ಆರಂಭಗೊಂಡಿದೆ. ಬುಧವಾರವೂ ಮಧ್ಯಾಹ್ನ ಕಳೆದರೂ ಮುಂದುವರಿಯುತ್ತಲೇ ಇದೆ. ಬುಧವಾರ ಬೆಳಿಗ್ಗೆ ಆಶ್ರಮದೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ರಾಮ್‌ಪಾಲ್ ಬೆಂಬಲಿಗರು ಗುಂಡು ಮತ್ತು ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದ್ದಾರೆ. ಪೊಲೀಸರು ಮತ್ತು ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ಐವರು ಮಹಿಳೆಯರು ಒಂದು ಮಗು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಹರಿಯಾಣ ಪೊಲೀಸ್‌ ಮಹಾನಿರ್ದೇಶಕ ಎಸ್‌.ಎನ್‌ ವಷಿಷ್ಠ ಸುದ್ದಿಸಂಸ್ಥೆಗೆ ದೃಢಪಡಿಸಿದ್ದಾರೆ.

ಈ ನಡುವೆ ಮಹಿಳೆಯರು, ಮಕ್ಕಳು ಸೇರಿದಂತೆ  10 ಸಾವಿರಕ್ಕೂ ಹೆಚ್ಚು ಬೆಂಬಲಿಗರು ಆಶ್ರಮದಿಂದ ಹೊರಬಂದಿದ್ದಾರೆ. ಇನ್ನೂ 5 ಸಾವಿರಕ್ಕೂ ಹೆಚ್ಚು ಬೆಂಬಲಿಗರು ಒಳಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಮಂಗಳವಾರ ನಡೆದ ಈ ಘರ್ಷಣೆಯಲ್ಲಿ 200 ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ರಾಮ್‌ಪಾಲ್‌ ಅಶ್ರಮದ ಒಳಗಿದ್ದಾರೆಯೇ ಅಥವಾ ಹೊರಗೆ ಬೇರೆ ರಹಸ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾರೆಯೇ ಎನ್ನುವುದರ ಕುರಿತು ಗೊಂದಲಗಳು ಇನ್ನೂ ಮುಂದುವರಿದಿದೆ.   ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಪೊಲೀಸರು ಮಾತ್ರ ರಾಮ್‌ಪಾಲ್‌ ಆಶ್ರಮದ ಒಳಗಡೇ ಇದ್ದಾರೆ ಎಂದು ಬಲವಾಗಿ ಹೇಳುತ್ತಿದ್ದಾರೆ.

ಹಿನ್ನೆಲೆ: ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಸೋಮವಾರ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ರಾಮ್‌ಪಾಲ್‌ ಹಾಜರಾಗಬೇಕಿತ್ತು. ಆದರೆ, ಬಂಧನದ ಭೀತಿಯಿಂದ ಅವರು ರಹಸ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದರು. ಹೀಗಾಗಿ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿತ್ತು.

ರಾಮ್‌ಪಾಲ್‌ ಅವರನ್ನು ಶುಕ್ರವಾರದೊಳಗೆ ಹಾಜರುಪಡಿಸುವಂತೆ ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದರಿಂದ ಹೇಗಾದರು ಮಾಡಿ ಅವರನ್ನು ಬಂಧಿಸಲೇಬೇಕೆಂದು ಪೊಲೀಸರು ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಪೊಲೀಸರು ದೇಶದ್ರೋಹ ಆರೋಪದಡಿಯಲ್ಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment