ನವದೆಹಲಿ, ನ.20: ಅನ್ಯ ಜಾತಿಯ ಯುವಕನನ್ನು ವಿವಾಹವಾದ ಕಾರಣಕ್ಕಾಗಿ ವಿದ್ಯಾರ್ಥಿನಿಯನ್ನು ಪೋಷಕರೇ ಮರ್ಯಾದಾ ಹತ್ಯೆ ನಡೆಸಿರುವ ಆಘಾತಕಾರಿ ಘಟನೆ ನವದೆಹಲಿಯಲ್ಲಿ ನಡೆದಿದೆ.
ಭಾವನಾ ಯಾದವ್ ಎಂಬ ವಿದ್ಯಾರ್ಥಿನಿ ನ.20ರಂದು ಅಭಿಷೇಕ್ ಎಂಬ ಯುವಕನನ್ನು ವಿವಾಹವಾಗಿದ್ದಳು. ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಯುವಕನು ಕೆಳಜಾತಿಗೆ ಸೇರಿದ್ದರಿಂದ ಪೋಷಕರು ಮದುವೆಯಾಗಬಾರದೆಂದು ಎಚ್ಚರಿಕೆ ನೀಡಿದ್ದರು. ತಂದೆ-ತಾಯಿಗಳ ವಿರೋಧದ ನಡುವೆಯೂ ಅಭಿಷೇಕ್ ಹಾಗೂ ಭಾವನಾ ಯಾದವ್ ನವದೆಹಲಿಯಲ್ಲಿ ಆರ್ಯ ಸಮಾಜದ ಸಂಪ್ರದಾಯದಂತೆ ವಿವಾಹ ಮಾಡಿಕೊಂಡಿದ್ದರು.
ತಮ್ಮ ಪುತ್ರಿ ಕುಟುಂಬದ ಮರ್ಯಾದೆ ಹಾಳು ಮಾಡಿದಳೆಂಬ ಏಕೈಕ ಕಾರಣಕ್ಕಾಗಿ ಭಾವನಾ ಯಾದವ್ ಪೋಷಕರಾದ ಜಗ್ಮೋಹನ್ ಹಾಗೂ ಸಾವಿತ್ರಿ ಮತ್ತಿತರರು ಸೇರಿಕೊಂಡು ಮನೆಯಲ್ಲಿ ಹತ್ಯೆ ಮಾಡಿದ್ದರು.
ಜಗ್ಮೋಹನ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ದೆಹಲಿ ಸ್ಥಳೀಯ ಕಾಂಗ್ರೆಸ್ನ ಸದಸ್ಯರಾಗಿದ್ದಾರೆ. ತಮ್ಮ ಮಗಳು ಅನಾರೋಗ್ಯದಿಂದ ಮೃತಪಟ್ಟಿದ್ದಳೆಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ದೆಹಲಿಯಲ್ಲಿ ಭಾವನಾ ಯಾದವ್ಳ ಅಂತ್ಯ ಸಂಸ್ಕಾರವನ್ನು ಗೌಪ್ಯವಾಗಿ ಮಾಡಲಾಗಿತ್ತು. ಇದರಿಂದ ಅನುಮಾನಗೊಂಡ ಕೆಲ ಸಾರ್ವಜನಿಕರು ಯಾರಿಗೂ ತಿಳಿಯದಂತೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿದಾಗ ಇದು ಮರ್ಯಾದಾ ಹತ್ಯೆ ಎಂಬುದು ದೃಢಪಟ್ಟಿತು.
ಸದ್ಯಕ್ಕೆ ಪೊಲೀಸರ ವಶದಲ್ಲಿರುವ ಜಗ್ಮೋಹನ್ ಮತ್ತು ಸಾವಿತ್ರಿ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಕುಟುಂಬದ ಮರ್ಯಾದೆ ಹಾಳಾಗುತ್ತದೆ. ಯಾವುದೇ ಕಾರಣಕ್ಕೂ ತಮ್ಮ ಪುತ್ರಿಯನ್ನು ಮದುವೆಯಾಗಬಾರದೆಂದು ಅಭಿಷೇಕ್ಗೆ ಬೆದರಿಕೆ ಹಾಕಿದ್ದರು. ಮೂಲತಃ ಅಭಿಷೇಕ್ ಪಂಜಾಬ್ನವನಾದರೆ ಭಾವನಾ ಯಾದವ್ ರಾಜಸ್ಥಾನದವರು. ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು.