ವ್ಯಾಟಿಕನ್ ಸಿಟಿ: ಕೇರಳ ಮೂಲದ ಇಬ್ಬರಿಗೆ ಸಂತ ಪದವಿ ಪ್ರಧಾನ ಮಾಡಲಾಗಿದ್ದು, ದಿ.ಫಾದರ್ ಕುರಿಯಕೊಸ್ ಇಲಿಯಾಸ್ ಚಾವರ ಮತ್ತು ದಿ.ಸಿಸ್ಟರ್ ಯುಫ್ರೇಸಿಯಾ ಅವರಿಗೆ ಮರಣೋತ್ತರ ಸಂತ ಪದವಿ ಪ್ರಧಾನ ಮಾಡಲಾಗಿದೆ.
ದೇವರನಾಡು ಎಂದೇ ಖ್ಯಾತಿಗಳಿಸಿರುವ ಕೇರಳಕ್ಕೆ ಮತ್ತೊಂದು ಗರಿ ಮೂಡಿದ್ದು, ಧಾರ್ಮಿಕವಾಗಿ ಮತ್ತೆ ವಿಶ್ವ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದೆ. ದಿ.ಫಾದರ್ ಕುರಿಯಕೊಸ್ ಇಲಿಯಾಸ್ ಚಾವರ ಮತ್ತು ದಿ.ಸಿಸ್ಟರ್ ಯುಫ್ರೇಸಿಯಾ ಅವರಿಗೆ ಮರಣೋತ್ತರ ಸಂತ ಪದವಿ ಪ್ರಧಾನ ವಿಚಾರ ಕೇರಳದ ಕ್ರೈಸ್ತ ಧರ್ಮೀಯರಲ್ಲಿ ಹರ್ಷವನ್ನುಂಟು ಮಾಡಿದೆ. ವ್ಯಾಟಿಕನ್ ಸಿಟಿಯಲ್ಲಿ ಇಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪೋಪ್ ಫ್ರಾನ್ಸಿಸ್ ಅವರು ದಿ.ಫಾದರ್ ಚಾವರ ಮತ್ತು ದಿ.ಸಿಸ್ಟರ್ ಯುಫ್ರೇಸಿಯಾ ಅವರಿಗೆ ಮರಣೋತ್ತರ ಸಂತ ಪದವಿ ಪ್ರಧಾನ ಮಾಡಿದರು.
ಈ ವಿಶೇಷ ಕಾರ್ಯಕ್ರಮಕ್ಕೆ ರಾಜ್ಯಸಭೆಯ ಉಪಸಭಾಪತಿ ಪಿಜೆ ಕುರಿಯನ್ ಅವರು ಸೇರಿದಂತೆ ಕೇರಳದಿಂದ ಆಗಮಿಸಿದ್ದ ಸುಮಾರು 5 ಸಾವಿರ ಕ್ರಿಶ್ಚಿಯನ್ ಧರ್ಮೀಯರು ಕೂಡ ಸಾಕ್ಷಿಯಾಗಿದ್ದರು.
ಸಂತ ಪದವಿ ಎಂದರೇನು?
ಹಿಂದೂ ಧರ್ಮದಲ್ಲಿ ಮಹರ್ಷಿಗಳಿಗೆ ಮತ್ತು ಮುಸ್ಲಿಂ ಧರ್ಮದಲ್ಲಿ ಪ್ರವಾದಿಗಳಿಗೆ ನೀಡಲಾಗುವಷ್ಟೇ ಮಹತ್ವವನ್ನು ಕ್ರಿಶ್ಚಿಯನ್ ಧರ್ಮದಲ್ಲಿ ಸಂತರಿಗೆ ನೀಡಲಾಗುತ್ತದೆ. ಸಿಖ್ ಧರ್ಮದಲ್ಲಿ ಗುರು ಸ್ಥಾನದಂತೆ ಸಂತ ಸ್ಥಾನ ಅತ್ಯಂತ ಪವಿತ್ರವಾದ ಸ್ಥಾನವಾಗಿದೆ. ಕ್ರಿಶ್ಚಿಯನ್ ಧರ್ಮೀಯರ ಪವಿತ್ರ ಕ್ಷೇತ್ರ ರೋಮ್‌ನ ವ್ಯಾಟಿಕನ್ ಸಿಟಿಯಲ್ಲಿ ಈ ಪದವಿಯನ್ನು ಪೋಪ್ ಅವರು ಪ್ರಧಾನ ಮಾಡುತ್ತಾರೆ. ಅದರಂತೆ ಈ ಬಾರಿ ಕೇರಳ ಮೂಲದ ಇಬ್ಬರಿಗೆ ಸಂತ ಪದವಿಯನ್ನು ಪ್ರಧಾನ ಮಾಡಲಾಗಿದೆ.