ನವದೆಹಲಿ: ದೆಹಲಿಯ ಜನನಿಬಿಡ ಮಾರುಕಟ್ಟೆಯಾದ ಕಮಲಾನಗರ್‌ನಲ್ಲಿ ಬ್ಯಾಂಕ್ ವ್ಯಾನೊಂದರಿಂದ ರು.1.5 ಕೋಟಿ ದೋಚಿದ ಕಳ್ಳರು, ಸೆಕ್ಯೂರಿಟಿ ಗಾರ್ಡ್‌ನ್ನು ಹತ್ಯೆಗೈದು ಪರಾರಿಯಾದ ಘಟನೆ ವರದಿಯಾಗಿದೆ.
ಶನಿವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಕಮಲಾನಗರದ ಬಂಗ್ಲೆ ರೋಡ್‌ನಲ್ಲಿರುವ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವ್ಯಾನ್‌ನ್ನು ತಡೆಗಟ್ಟಿ ಬೈಕ್‌ನಲ್ಲಿ ಬಂದ ಕಳ್ಳರು ಈ ದರೋಡೆ ನಡೆಸಿದ್ದಾರೆ.
ಆ ವೇಳೆ ದರೋಡೆಕೋರರು ಎಟಿಎಂನಲ್ಲಿದ್ದ ಸೆಕ್ಯೂರಿಟಿ ಹಣೆಗೆ ಎರಡು ಬಾರಿ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಖಾಸಗಿ ಬ್ಯಾಕೊಂದರ ವ್ಯಾನ್ ಎಟಿಎಂಗೆ ಹಣ ತುಂಬಲು ಬಂದಿದ್ದು, ಸೆಕ್ಯೂರಿಟಿ ಗಾರ್ಡ್ ಅದಕ್ಕೆ ಕಾವಲಾಗಿ ನಿಂತಿದ್ದರು. ಆ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಸೆಕ್ಯೂರಿಟಿ ಗಾರ್ಡ್ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ವ್ಯಾನ್‌ನೊಳಗಿದ್ದ ರು.1.5 ಕೋಟಿ ದೋಚಿದ್ದಾರೆ ಎಂದು ದೆಹಲಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಗೋಯಲ್ ಹೇಳಿದ್ದಾರೆ.
ಘಟನೆಯ ಪ್ರತ್ಯಕ್ಷಸಾಕ್ಷಿಗಳು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಸುದ್ದಿ ತಿಳಿಸಿದ್ದಾರೆ. ತಕ್ಷಣವೇ ಪೊಲೀಸ್ ಆಗಮಿಸಿದ್ದು, ಗಂಭೀರ ಗಾಯಗೊಂಡ ಸೆಕ್ಯೂರಿಟಿ ಗಾರ್ಡ್‌ನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆ ಹೊತ್ತಿಗೆ ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿದ್ದ ಎಂದು ಪೊಲೀಸರು ಹೇಳಿದ್ದಾರೆ.
ದರೋಡೆ ಮಾಡಿದ ಇಬ್ಬರು ಆಗಂತುಕರ ವಿರುದ್ಧ ರೂಪ್ ನಗರ್ ಪೊಲೀಸ್ ಠಾಣೆಯಲ್ಲಿ ಹತ್ಯೆ, ದರೋಡೆ ಮತ್ತು ಮಾರಕಾಯುಧಗಳನ್ನು ಹೊಂದಿರುವ ಬಗ್ಗೆ ಕೇಸು ದಾಖಲಿಸಲಾಗಿದೆ. ಇದೀಗ ಘಟನಾ ಸ್ಥಳದ ಪಕ್ಕದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಬಳಸಿ ದರೋಡೆಕೋರರನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು ಮಗ್ನರಾಗಿದ್ದಾರೆ.