ನವದೆಹಲಿ: ಸುಕ್ಮಾ ನಕ್ಸಲ್ ದಾಳಿಯಲ್ಲಿ ಬಲಿಯಾದ ಸಿಆರ್‌ಪಿಎಫ್ ಯೋಧನೊಬ್ಬನ ರಕ್ತಸಿಕ್ತ ಸಮವಸ್ತ್ರ ಮತ್ತು ಶೂ ಛತ್ತೀಸ್‌ಗಢದ ಆಸ್ಪತ್ರೆಯೊಂದರ ಆವರಣದಲ್ಲಿದ್ದ ಕಸದ ಬುಟ್ಟಿಯಲ್ಲಿ ಬುಧವಾರ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ,
ಹುತಾತ್ಮನ ಸಮವಸ್ತ್ರ ಅದ್ಹೇಗೆ ಕಸದ ಬುಟ್ಟಿಯಲ್ಲಿ ಪತ್ತೆಯಾಯಿತು? ಎಂಬುದರ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಛತ್ತೀಸ್‌ಗಢ ಸರ್ಕಾರಕ್ಕೆ ಗುರುವಾರ ಆದೇಶಿಸಿದೆ.
ಮರಣೋತ್ತರ ಪರೀಕ್ಷೆಯ ನಂತರ ಮೃತರ ವಸ್ತುಗಳನ್ನು ವಾಪಾಸ್ ತರುವ ಹೊಣೆ ಪೊಲೀಸರದ್ದು. ಆದರೆ ಆಸ್ಪತ್ರೆಯಲ್ಲಿ ಯೋಧನೊಬ್ಬನ ಸಮವಸ್ತ್ರ ಮತ್ತು ಆತನ ವಸ್ತುಗಳು ಬಾಕಿಯಿವೆ ಎಂದು ಹೇಳಿದ್ದು, ಅದನ್ನು ತರುವಂತೆ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಆದೇಶಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ಆರ್.ಕೆ ವಿಜಿ ಹೇಳಿದ್ದಾರೆ.
ಆದಾಗ್ಯೂ, ಯಾವುದೇ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿದ ಮೇಲೆ ಮೃತರ ವಸ್ತುಗಳನ್ನು ವಾರೀಸುದಾರರಿಗೆ ಒಪ್ಪಿಸಲಾಗುವುದು. ಅದನ್ನೆಲ್ಲಿಯೂ ತೆರೆದ ಜಾಗದಲ್ಲಿ ಇಡುವುದಿಲ್ಲ. ಆದರೆ ರಕ್ತ ಸಿಕ್ತವಾದ ಬಟ್ಟೆಗಳನ್ನು ಹಾಗೆಯೇ ತೆರೆದಿಟ್ಟಿರುವ ಬಗ್ಗೆ ವೀಡಿಯೋವನ್ನು ನಾನೀಗ ನೋಡಿದೆ. ಇದು ದುರದೃಷ್ಟಕರ ಎಂದು ಡಾ. ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಆಸ್ಪತ್ರೆಯ ಡೀನ್ ವಿವೇಕ್ ಚೌಧರಿ ಹೇಳಿದ್ದಾರೆ.
ಪ್ರಸ್ತುತ ಪ್ರಕರಣದ ಬಗ್ಗೆ ಡಿಐಜಿ, ಸಿಆರ್‌ಪಿಎಫ್, ಪ್ರದೀಪ್ ಚಂದ್ರ ತನಿಖೆ ನಡೆಸುತ್ತಿದ್ದಾರೆ.
ಕಳೆದ ಸೋಮವಾರ ಮಾವೋವಾದಿಗಳು ಛತ್ತೀಸ್‌ಗಢದ ಅರಣ್ಯದಲ್ಲಿ ದಾಂಧಲೆ ನಡೆಸಿ 14 ಯೋಧರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.