ಉತ್ತರಖಂಡ್: ರೂರ್ಕಿ ಪ್ರದೇಶದಲ್ಲಿನ ದಾವ್ ಕಾಲೇಜು ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ.
ಶಾಲೆಯ ಪಕ್ಕದಲ್ಲಿದ್ದ ಕಸದ ತೊಟ್ಟಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 6ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಬಾಲಕ ಸ್ಫೋಟಕ್ಕೆ ಬಲಿಯಾಗಿದ್ದಾನೆ. ಘಟನೆಯಿಂದಾಗಿ ರೂರ್ಕಿಯಾದ್ಯಂತ ತಲ್ಲಣ ಮೂಡಿಸಿತು.
ಮೃತ ಬಾಲಕ, ಶಾಲೆಯ ಪಕ್ಕದ ಕಸದ ತೊಟ್ಟಿಯಲ್ಲಿದ್ದ ಪೊಟ್ಟಣವನ್ನು ತಂದಾಗ, ಸ್ಫೋಟ ಸಂಭವಿಸಿತು ಎಂದು ಶಾಲಾ ಮಕ್ಕಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಉತ್ತರಖಂಡ್ ಮುಖ್ಯಮಂತ್ರಿ ಹರೀಶ್ ರಾವತ್, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಅಲ್ಲದೆ ಪೊಲೀಸರ ತನಿಖೆಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ಬಿಜೆಪಿ ನಾಯಕ ಸಂಗೀತ್ ಸೋಮ್, ದಾವ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸುವ ಮುನ್ನವೇ ಸ್ಫೋಟ ಸಂಭವಿಸಿದೆ.
ಸಂಗೀತ್ ಸೋಮ್ ಅವರನ್ನು ಗುರಿಯನ್ನಾಗಿಸಿ ಬಾಂಬ್ ಸ್ಪೋಟ ನಡೆಸಲು ದುಷ್ಕರ್ಮಿಗಳು ಸಂಚು ರೂಪಿಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಘಟನೆಯ ಕುರಿತು ಪರಿಶೀಲನೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಹಿರಿಯ ಅಧಿಕಾರಿ ರಾಮ್ ಸಿಂಗ್ ಮೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.