ನವದೆಹಲಿ: ಪಕ್ಷದ ಜಾಹೀರಾತಿನ ವ್ಯಂಗ್ಯಚಿತ್ರದಲ್ಲಿ ಅಣ್ಣಾ ಹಜಾರೆ ಅವರನ್ನು ‘ಸಾಯಿಸಿ’ರುವ ಬಿಜೆಪಿ ಈ ಬಗ್ಗೆ ಕ್ಷಮೆ ಯಾಚಿಸಲೇಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ವ್ಯಂಗ್ಯಚಿತ್ರದ ಬಗ್ಗೆ ತೀವ್ರವಾಗಿ ಆಕ್ಷೇಪಿಸಿ ಟ್ವೀಟ್ ಮಾಡಿರುವ ಅವರು, ‘1948ರ ಇದೇ ದಿನ ನಾಥುರಾಮ್ ಗೋಡ್ಸೆ ಗಾಂಧೀಜಿಯನ್ನು ಕೊಂದರೆ, ಬಿಜೆಪಿ ಪಕ್ಷ ಇಂದು ಅಣ್ಣಾ ಹಜಾರೆ ಅವರನ್ನು ಕೊಂದಿದೆ’ ಎಂದಿದ್ದಾರೆ.
ಬಿಜೆಪಿ ಪಕ್ಷ ಜಾಹೀರಾತಿಗೆ ಬಳಸಿರುವ ವ್ಯಂಗ್ಯಚಿತ್ರದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮದುವೆಯಾಗಿರುವಂತೆ ಬಿಂಬಿಸಲಾಗಿದೆ. ಮಕ್ಕಳ ತಲೆಯ ಮೇಲೆ ಕೇಜ್ರಿವಾಲ್ ಅವರು ಕೈಇಟ್ಟಿರುವ ಮತ್ತು ಅಣ್ಣಾ ಹಜಾರೆ ಭಾವಚಿತ್ರವನ್ನು ಗೋಡೆಗೆ ನೇತುಹಾಕಿ ಅದಕ್ಕೆ ಹಾರ ಹಾಕಿರುವ ಈ ವ್ಯಂಗ್ಯಚಿತ್ರದ ಬಗ್ಗೆ ಕೇಜ್ರಿವಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಪ್ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಕೇಜ್ರಿವಾಲ್, ‘ಕೆಲ ದುಷ್ಟಶಕ್ತಿಗಳು ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತವೆ. ಆದರೆ, ಆ ಬಗ್ಗೆ ತಲೆಕೆಡಿಸಿಕೊಳ್ಳದೆ ದೆಹಲಿಯ ಸಕಾರಾತ್ಮಕ ಕಾರ್ಯಸೂಚಿ ಕಡೆಗೆ ಗಮನ ಹರಿಸಬೇಕು’ ಎಂದು ಹೇಳಿದ್ದಾರೆ.
‘ಆಪ್ ದೆಹಲಿಯಲ್ಲಿ ಸರ್ಕಾರ ರಚಿಸಲಿದೆ. ದೆಹಲಿಯ ಸೇವೆಗೆ ಮತ್ತು ಮಹಿಳೆಯರ ಸುರಕ್ಷತೆಗೆ ನಾವು ಬದ್ಧರಿದ್ದೇವೆ’ ಎಂದು ಹೇಳಿರುವ ಕೇಜ್ರಿವಾಲ್, ‘ಅಣ್ಣಾ ಹಜಾರೆ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.