ನವದೆಹಲಿ: ಜಯಂತಿ ನಟರಾಜನ್ ಅವರು ಪಕ್ಷ ತೊರೆದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಮಾಡುತ್ತಿರುವ ಆರೋಪ ಆಧಾರ ರಹಿತ ಎಂದು ಹೇಳಿರುವ ಕಾಂಗ್ರೆಸ್‌ನ ಹಿರಿಯ ಮುಖಂಡರು ರಾಹುಲ್ ಮತ್ತು ಸೋನಿಯಾ ಗಾಂಧಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
‘ಜಯಂತಿ ನಟರಾಜನ್ ಅವರ ಆರೋಪಕ್ಕೆ ತಳಬುಡವಿಲ್ಲ’ ಎಂದಿರುವ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ‘ಇದು ಪ್ರಚೋದನಕಾರಿ ಆರೋಪ’ ಎಂದಿದ್ದಾರೆ.
ಜಯಂತಿ ನಟರಾಜನ್ ಅವರ ಬಳಿಕ ಪರಿಸರ ಖಾತೆ ವಹಿಸಿಕೊಂಡಿದ್ದ ಜೈರಾಮ್ ರಮೇಶ್, ‘ಇಲಾಖೆಯ ಕಾರ್ಯಭಾರದಲ್ಲಿ ಯಾವುದೇ ಹಸ್ತಕ್ಷೇಪ ಇರಲಿಲ್ಲ’ ಎಂದು ಹೇಳಿದ್ದಾರೆ.
‘ಇಲಾಖೆಗೆ ಸಂಬಂಧಿಸಿದ ಕೆಲಸದಲ್ಲಿ ಯಾವುದೇ ಹಸ್ತಕ್ಷೇಪ ಇರಲಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ. ‘ಇಂಥದ್ದನ್ನು ಮಾಡಿ,ಇಂಥದ್ದನ್ನು ಮಾಡಬೇಡಿ’ ಎಂದು ರಾಹುಲ್ ಗಾಂಧಿ ನೇರವಾಗಿ ಅಥವಾ ಪರೋಕ್ಷವಾಗಿ ಎಂದೂ ಹೇಳಿರಲಿಲ್ಲ’ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಸೋನಿಯಾ ಪ್ರಧಾನಿಯಾಗಬಹುದಿತ್ತು: ಬೆಂಗಳೂರಿನಲ್ಲಿ ಮಾತನಾಡಿರುವ ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ, ‘ಸೋನಿಯಾ ಗಾಂಧಿ ಅವರು ಮನಸ್ಸು ಮಾಡಿದ್ದರೆ ಮೂರು ಬಾರಿ ಪ್ರಧಾನಮಂತ್ರಿಯಾಗಲು ಅವಕಾಶವಿತ್ತು. ರಾಹುಲ್ ಗಾಂಧಿ ಅವರೂ ಪ್ರಧಾನಿಯಾಗಬಹುದಿತ್ತು’ ಎಂದು ಹೇಳಿದ್ದಾರೆ.
ಮೃಗೀಯ ಆರೋಪ: ಜಯಂತಿ ನಟರಾಜನ್ ಅವರು ಸೋನಿಯಾ ಮತ್ತು ರಾಹುಲ್ ಅವರ ಮೇಲೆ ಮೃಗೀಯ ಆರೋಪ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪಿ.ಸಿ.ಚಾಕೊ ಪ್ರತಿಕ್ರಿಯಿಸಿದ್ದಾರೆ.
‘ಅವಕಾಶವಾದಿಯಂತೆ ವರ್ತಿಸುತ್ತಿರುವ ಜಯಂತಿ ಅವರು ಒಂದು ವರ್ಷದ ನಂತರ ಈ ಆರೋಪ ಮಾಡುತ್ತಿರುವುದಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಅರ್ಥವಾಗಿದೆ. ರಾಜೀನಾಮೆ ಕೊಟ್ಟು ಹೊರಹೋಗುವವರನ್ನು ನಾವು ಹಿಡಿದುಕೊಳ್ಳುವುದಿಲ್ಲ’ ಎಂದು ಅವರು ಹೇಳಿದ್ದಾರೆ.