ರಾಷ್ಟ್ರೀಯ

ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ತಲೆದಂಡ: ಗೋಯಲ್‌ ಕೇಂದ್ರದ ನೂತನ ಗೃಹ ಕಾರ್ಯದರ್ಶಿ

Pinterest LinkedIn Tumblr

matanga-goooo

ನವದೆಹಲಿ: ಶಾರದಾ ಚಿಟ್‌ ಫಂಡ್‌ ಹಗರಣ­ದಲ್ಲಿ ಕಾಂಗ್ರೆಸ್‌ ಮುಖಂಡ ಮಾತಂಗ್‌ ಸಿಂಗ್‌ ಅವರ ಬಂಧನ ತಡೆಯಲು ಯತ್ನಿಸಿದ ವಿವಾದಕ್ಕೆ ಸಿಲುಕಿದ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ಅವರು ಬುಧವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ.
ಇದಕ್ಕೂ ಮೊದಲು, ಮಾಜಿ ಸಚಿವ ಮಾತಂಗ್ ಸಿಂಗ್‌್ ಅವರ ಬಂಧನ ತಡೆಯುವ ಸಲುವಾಗಿ ಸಿಬಿಐ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದ ಗೋಸ್ವಾಮಿ ಅವರನ್ನು ಸರ್ಕಾರ ವಜಾ ಮಾಡಿತ್ತು ಎಂದು ಮೂಲಗಳು ತಿಳಿಸಿದ್ದವು.

ಆದರೆ, ಹಿರಿಯ ಅಧಿಕಾರಿಯಾದ ಗೋಸ್ವಾಮಿ ಅವರಿಗೆ ಗೌರವಯುತ­ವಾಗಿ ಹುದ್ದೆಯಿಂದ ನಿರ್ಗಮಿಸಲು ಅವಕಾಶ ಮಾಡಿಕೊಡುವ ಸಲುವಾಗಿ ಅವರಿಗೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿತು ಎಂದು ನಂತರ ಮಾಧ್ಯಮಗಳಿಗೆ ತಿಳಿಸಲಾಯಿತು. ಇದರಿಂದ ಒಂದು ವಾರದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಕೇಂದ್ರ ಸರ್ಕಾರವು ಸೇವೆಯಿಂದ ಬಿಡುಗಡೆ ಮಾಡಿದಂತೆ ಆಗಿದೆ. ವಿದೇಶಾಂಗ ವ್ಯವಹಾರಗಳ ಕಾರ್ಯ­ದರ್ಶಿ ಸುಜಾತಾ ಸಿಂಗ್‌ ಅವರೂ ವಿವಾದಾತ್ಮಕವಾಗಿಯೇ ಕಳೆದ ಬುಧ­ವಾರ ಸೇವೆಯಿಂದ ನಿರ್ಗಮಿಸಿದ್ದರು.

ಮಾತಂಗ್‌ ಅವರ ಬಂಧನವನ್ನು ಗೃಹ ಕಾರ್ಯ­ದರ್ಶಿ ತಡೆಯಲು ಯತ್ನಿಸಿದ್ದರು ಎಂಬ ವರದಿ ಮಾಧ್ಯಮ­ಗಳಲ್ಲಿ ಬಿತ್ತರವಾದ ನಂತರ ಈ ವಿಷಯವಾಗಿ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಂಗಳವಾರ ರಾತ್ರಿ ಚರ್ಚಿಸಿದ್ದರು.
ಇದಕ್ಕೂ ಮುನ್ನ, ಗೋಸ್ವಾಮಿ ಅವರೊಂದಿಗೂ ರಾಜನಾಥ್‌  ಮಾತ­ನಾ­ಡಿದ್ದರು. ಗೃಹ ಸಚಿವರ ಜತೆಗಿನ ಮಾತುಕತೆ ವೇಳೆಯಲ್ಲಿ, ಸಿಬಿಐ ಅಧಿಕಾರಿ­ಗಳಿಗೆ ದೂರವಾಣಿ ಕರೆ ಮಾಡಿದ್ದನ್ನು ಗೋಸ್ವಾಮಿ ಒಪ್ಪಿಕೊಂಡಿ­ದ್ದರು ಎನ್ನಲಾಗಿದೆ.

ಬುಧವಾರ ಗೋಸ್ವಾಮಿ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ರಾಜನಾಥ್‌, ಸುಮಾರು ಒಂದು ಗಂಟೆ ಕಾಲ ಅವರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಗೋಸ್ವಾಮಿ ಅವರು ತಾವು ಸಿಬಿಐ ಅಧಿಕಾರಿಗಳಿಗೆ ದೂರ­ವಾಣಿ ಕರೆ ಮಾಡಿದ್ದರ ಹಿಂದಿನ ಉದ್ದೇಶ  ವಿವರಿಸಿದ್ದರು ಎಂದು ಮೂಲಗಳು ಹೇಳಿವೆ.

ರಾಜನಾಥ್‌ ಅವರು ಸಿಬಿಐ ನಿರ್ದೇಶಕ ಅನಿಲ್‌ ಸಿನ್ಹಾ ಅವರನ್ನೂ ತಮ್ಮ ಕಚೇರಿಗೆ ಕರೆಸಿಕೊಂಡು ಈ ವಿವಾದ ಬಗ್ಗೆ ಮಾಹಿತಿ ಪಡೆದು­ಕೊಂಡರು. ಶನಿವಾರ  ಮಾತಂಗ್‌ ಸಿಂಗ್‌ ಅವರ ಬಂಧನಕ್ಕೂ ಮುನ್ನ ನಡೆದ ಘಟನೆಗಳ ಬಗ್ಗೆ ಸಿನ್ಹಾ ಅವರು  ಗೃಹ ಸಚಿವರಿಗೆ ವಿವರ ನೀಡಿದರು ಎನ್ನಲಾಗಿದೆ.

ಪ್ರಧಾನಿ ಕಾರ್ಯಾಲಯಕ್ಕೆ ಸಿಬಿಐ ವರದಿ:ಅನಿಲ್‌ ಸಿನ್ಹಾ ಅವರು ನಂತರ ಗೋಸ್ವಾಮಿ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ವಿವಾದ ಕುರಿತಂತೆ ಪ್ರಧಾನಿ ಅವರ ಕಾರ್ಯಾ­ಲಯಕ್ಕೆ ಸಿಬಿಐ ವರದಿ ಸಲ್ಲಿಸಿದೆ ಎಂದೂ ಮೂಲಗಳು ಹೇಳಿವೆ.

1978ರ ಐಎಎಸ್‌ ತಂಡದ ಜಮ್ಮು ಮತ್ತು ಕಾಶ್ಮೀರ ಶ್ರೇಣಿಯ ಅಧಿಕಾರಿ­ಯಾದ ಅನಿಲ್‌ ಗೋಸ್ವಾಮಿ ಅವರಿಗೆ ಕಳೆದ ಜನವರಿ 31ಕ್ಕೆ 60 ವರ್ಷ ತುಂಬಿತ್ತು. ಅವರಿಗೆ ಮುಂದಿನ ಜೂನ್‌ ವರೆಗೆ ಈ ಹುದ್ದೆಯಲ್ಲಿ ಮುಂದುವ­ರಿಯಲು ಅವಕಾಶ ಇತ್ತು. ಗೋಸ್ವಾಮಿ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ (2013) ಗೃಹ ಕಾರ್ಯದರ್ಶಿಯಾಗಿ ನೇಮಕ­ಗೊಂಡಿದ್ದರು.

1979 ತಂಡದ ಅಧಿಕಾರಿ
1979ರ ತಂಡದ ಕೇರಳ ಶ್ರೇಣಿಯ ಐಎಎಸ್‌ ಅಧಿಕಾರಿಯಾದ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಎಲ್‌.ಸಿ. ಗೋಯಲ್‌ ಅವರನ್ನು ಗೃಹ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

‘ಏನಾದರೂ ಹೇಳಿದ್ದೆನೆ’
ಬುಧವಾರ ನಡೆದ ಬೆಳ­ವಣಿಗೆಗಳಿಂದ ವ್ಯಾಕುಲರಾ­ಗಿದ್ದ ಅನಿಲ್‌ ಗೋಸ್ವಾಮಿ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾ­ಕರಿಸಿ­ದರು. ಸ್ವಲ್ಪ ಸಮಯದ ನಂತರ ಬೇಸರದಿಂದಲೇ ಮಾತನಾಡಿದ ಅವರು ‘ನಾನು  ಏನಾದರು ಹೇಳಿದ್ದನ್ನು ನೀವು ಯಾವ­ತ್ತಾ­ದರೂ ಕೇಳಿಸಿಕೊಂಡಿರುವಿರಾ’ ಎಂದರು.

ಮಾತಂಗ್‌–ಗೋಸ್ವಾಮಿ ಆಪ್ತರು
ಶನಿವಾರ ಬಂಧನಕ್ಕೆ ಒಳ­ಗಾದ ಮಾತಂಗ್‌ ಸಿಂಗ್‌ ಮತ್ತು ಗೋಸ್ವಾಮಿ ಅವರ ಆಪ್ತರು ಎನ್ನಲಾಗಿದೆ. ವಿವಾ­ದಾತ್ಮಕ ರಾಜಕಾರಣಿ­ಯಾದ ಅಸ್ಸಾಂ ಮೂಲದ ಮಾತಂಗ್‌ ಸಿಂಗ್‌, ಪಿ.ವಿ. ನರಸಿಂಹರಾವ್‌ ಅವರ ಸರ್ಕಾರ­ದಲ್ಲಿ ಗೃಹ ಖಾತೆಯ ರಾಜ್ಯ ಸಚಿವರಾಗಿದ್ದರು.

Write A Comment