ಗುರ್ಗಾಂವ್: ಗುರ್ಗಾಂವ್ ನ ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯೊಂದಿಗೆ ವಾಸವಿದ್ದ 16 ವರ್ಷದ ಅಮೆರಿಕನ್ ಬಾಲಕಿ ಮೇಲೆ ಆಕೆಯ ಫೇಸ್ ಬುಕ್ ಸ್ನೇಹಿತ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ನಡೆದಿದೆ.
ಮೂಲತಃ ಅಮೆರಿಕಾದ ಟೆಕ್ಸಾಸ್ ನವರಾದ ಈಕೆಯ ತಾಯಿ ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತನ್ನ ತಾಯಿಯೊಂದಿಗಿದ್ದ ಬಾಲಕಿ ಗುರ್ಗಾಂವ್ ನ ಪ್ರತಿಷ್ಟಿತ ಅಂತರಾಷ್ಟ್ರೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳೆಂದು ಹೇಳಲಾಗಿದೆ.
ಆಫ್ರಿಕಾ ಪ್ರಜೆ ಎನ್ನಲಾದ 22 ವರ್ಷದ ಯುವಕನೊಬ್ಬ ಈಕೆಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಆರು ತಿಂಗಳ ಹಿಂದೆ ಪರಿಚಯವಾಗಿದ್ದಾನೆ. ಈ ಅವಧಿಯಲ್ಲಿ ಎರಡು ಬಾರಿ ಅವರಿಬ್ಬರು ಮುಖಾಮುಖಿ ಭೇಟಿಯಾಗಿದ್ದು, ಇತ್ತೀಚೆಗೆ ಆಕೆಯನ್ನು ಗೆಸ್ಟ್ ಹೌಸ್ ಗೆ ಕರೆದುಕೊಂಡು ಹೋದ ಯುವಕ ಅತ್ಯಾಚಾರವೆಸಗಿದ್ದಾನೆ.
ತನ್ನ ಮೇಲೆ ಅತ್ಯಾಚಾರವೆಸಗಿರುವವನ ಕುರಿತು ಬಾಲಕಿ ಪೊಲೀಸರಿಗೆ ದೂರು ನೀಡಿದ್ದರೂ ಆತ ದೆಹಲಿ ನಿವಾಸಿಯೋ ಅಥವಾ ಗುರ್ಗಾಂವ್ ನಲ್ಲಿ ವಾಸವಾಗಿದ್ದನೇ ಎಂಬ ಮಾಹಿತಿ ಆಕೆಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಫೇಸ್ ಬುಕ್ ನಲ್ಲಿ ಆತ ನೀಡಿರುವ ಮಾಹಿತಿ ಆಧಾರದ ಮೇಲೆ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.