ರಾಷ್ಟ್ರೀಯ

ಆಂಟಿಬಯೋಟಿಕ್ ಕೋಳಿ ಮಾಂಸ ಸೇವನೆ ಮಾರಕವಂತೆ…!

Pinterest LinkedIn Tumblr

Chicken-Meat

ನವದೆಹಲಿ: ಭಾನುವಾರ ಕೋಳಿ ಮಾಂಸ ಬಾಯಿಗಿಡುವ ಮುನ್ನ  ಸ್ವಲ್ಪ ಯೋಚಿಸಿ. ಏಕೆಂದರೆ ನಾವು ಸೇವಿಸುವ ಕೋಳಿ ಮಾಂಸದಲ್ಲಿ ಆಂಟಿ ಬಯೋಟಿಕ್ ಅಂಶ ಹೆಚ್ಚಾಗಿರುತ್ತದೆ. ಇಂತಹ ಮಾಂಸ ಸೇವನೆಯಿಂದ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಕುಗ್ಗುತ್ತದೆ.  ಅಮೆರಿಕ ಮೂಲದ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಭಾರತೀಯರು ಆಂಟಿ ಬಯೋಟಿಕ್ ಅಂಶವಿರುವ ಕೋಳಿ ಸೇವನೆ ಮಾಡುತ್ತಿರುವುದು ದ್ವಿಗುಣಗೊಳ್ಳುತ್ತಿದೆಯಂತೆ.  2030ರ ವೇಳೆಗೆ ಭಾರತೀಯರು ಆಂಟಿ ಬಯೋಟಿಕ್ ಅಂಶ ಹೆಚ್ಚಾಗಿರುವ 4,743 ಟನ್ ಕೋಳಿ ಮಾಂಸ ಸೇವನೆ ಮಾಡಲಿದ್ದಾರಂತೆ.

ಕಳೆದ 2010ರಲ್ಲಿ 2066 ಟನ್‌ನಷ್ಟಿದ್ದ ಮಾಂಸ ಸೇವನೆ ದ್ವಿಗುಣಗೊಳ್ಳುತ್ತಲಿರುವುದು ಆತಂಕಕ್ಕೆ ಕಾರಣವಾಗಿದೆ.  ನೆರೆಯ ಚೀನಾ ಆಂಟಿ ಬಯೋಟಿಕ್ ಅಂಶವುಳ್ಳ ಕೋಳಿ ಸೇವನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ ಭಾರತೀಯರು 4ನೇ ಸ್ಥಾನದಲ್ಲಿದ್ದಾರೆ.

ದೆಹಲಿ ಮತ್ತಿತರ ಪ್ರದೇಶಗಳಿಂದ ಸಂಗ್ರಹಿಸಿದ ಕೋಳಿ ಮಾಂಸವನ್ನು ಪರೀಕ್ಷೆಗೊಳಪಡಿಸಿದಾಗ ಕೋಳಿಯಲ್ಲಿ ಶೇ.40ರಷ್ಟು ಆಂಟಿಬಯೋಟಿಕ್ ಅಂಶವಿರುವುದು ಪತ್ತೆಯಾಗಿದೆಯಂತೆ.  ಆಧುನಿಕ ಆಹಾರ ಪದ್ಧತಿಯಲ್ಲಿ ಪ್ರಾಣಿಪಕ್ಷಿಗಳು ಮೊದಲ ಸ್ಥಾನ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಕಾಣಿಕೆದಾರರು ಹೆಚ್ಚಿನ ಲಾಭಕ್ಕಾಗಿ ಕೋಳಿಗಳನ್ನು ಬಲಿಯುವಂತೆ ಮಾಡಲು ಆಂಟಿಬಯೋಟಿಕ್ ಚುಚ್ಚುಮದ್ದು ನೀಡುತ್ತಿರುವುದು ಇಷ್ಟೆಲ್ಲ ಅವಾಂತರಗಳಿಗೆ ಕಾರಣ ಎಂದು ಅಮೆರಿಕ ಮೂಲದ ಸಂಸ್ಥೆ ತಿಳಿಸಿದೆ.  ದಕ್ಷಿಣ ಕೋರಿಯ, ಯೂರೋಪಿಯನ್ ಖಂಡದ ಕೆಲವು ದೇಶಗಳು ಈಗಾಗಲೇ ಆಂಟಿಬಯೋಟಿಕ್ ಅಂಶವಿರುವ ಮಾಂಸವನ್ನು ನಿಷೇಧಿಸಿದೆ. ಅಮೆರಿಕದ ಮ್ಯಾಕ್‌ಡೊನಾಲ್ಡ್ ಸಂಸ್ಥೆ ತಮ್ಮ ಗ್ರಾಹಕರಿಗೆ ಆಂಟಿಬಯೋಟಿಕ್ ಅಂಶವಿರುವ ಮಾಂಸದ ತಿನಿಸುಗಳನ್ನು ಸರಬರಾಜು ಮಾಡುವುದಿಲ್ಲ ಎಂದು ಘೋಷಿಸಿದೆ.  ಆದರೆ ಭಾರತದಲ್ಲಿ ಆಂಟಿಬಯೋಟಿಕ್ ಕೋಳಿ ಮಾರಾಟ ನಿಷೇಧಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲದಿರುವುದು ದುರಂತವೇ ಸರಿ.

ಭಾರತೀಯ ಮಕ್ಕಳು ಇಂತಹ ಮಾಂಸ ಸೇವನೆಯಿಂದ ತಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. 2013ರಲ್ಲಿ 58 ಸಾವಿರ ಮಕ್ಕಳು ಸಾವನ್ನಪ್ಪಿದರೆ ಇದರ ಸಂಖ್ಯೆ 2050ರ ವೇಳೆಗೆ 20 ಲಕ್ಷ ದಾಟುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.  ರೈತರು ಮತ್ತು ಕೋಳಿ ಸಾಕಾಣಿಕೆದಾರರು ಫೌಲ್ಟ್ರಿಗಳಲ್ಲಿ ಸಾಕಲಾಗುವ ಕೋಳಿ ಮರಿಗಳಿಗೆ ಯಾವುದೇ ರೋಗ ಕಾಣಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಆಂಟಿಬಯೋಟಿಕ್ ಚುಚ್ಚುಮದ್ದು ನೀಡುವುದು ಅನಿವಾರ್ಯವಾಗಿದೆ. ಕೋಳಿ ದೇಹ ಸೇರುವ ಆಂಟಿಬಯೋಟಿಕ್ ಅಂಶ ಮಾನವನ ದೇಹ ಸೇರಿದ ಮೇಲೆ ರೋಗ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ.

ಅದರಲ್ಲೂ ಇತ್ತೀಚೆಗೆ ಕೃತಕವಾಗಿ ಪಕ್ಷಿಗಳನ್ನು ಬೆಳೆಸುವುದು ಸಾಮಾನ್ಯವಾಗಿದೆ. ಈ ರೀತಿ ಸಾಕಲಾಗುವ ಬಾಯ್ಲರ್ ಕೋಳಿ ಸೇವನೆ  ಮಾನವನ ದೇಹದ ಮೇಲೆ ಅತಿಹೆಚ್ಚು ದುಷ್ಪರಿಣಾಮ ಬೀರಲಿದೆ.  ಭಾರತದಂತಹ ರಾಷ್ಟ್ರದಲ್ಲಿ ಸಣ್ಣ ಫೌಲ್ಟ್ರಿಯಲ್ಲಿ ಸಾವಿರಾರು ಕೋಳಿ  ಸಾಕಾಣಿಕೆ ಮಾಡುವುದರಿಂದ ಸೋಂಕು ತಗುಲುವುದು ಮಾಮೂಲು. ಹೀಗಾಗಿ ರೈತರು ಮತ್ತು ಸಾಕಾಣಿಕೆದಾರರು ಆಂಟಿಬಯೋಟಿಕ್ ರಾಸಾಯನಿಕಕ್ಕೆ ಮೊರೆ ಹೋಗುವುದು ಮಾಮೂಲಾಗಿದೆ.  ಆದರೆ ಕೆಲವು ವೈದ್ಯರು ಕೋಳಿಗಳ ಮೇಲೆ ಪ್ರಯೋಗಿಸಲಾಗುವ ಆಂಟಿ ಬಯೋಟಿಕ್ ಅಂಶ ಮೊಟ್ಟೆ ಮತ್ತು ಮಾಂಸ ಸೇರುವುದು ಅಸಾಧ್ಯ. ಹೀಗಾಗಿ ಕೋಳಿ ಸೇವನೆ ಮನುಷ್ಯನ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ವಾದಿಸುತ್ತಾರೆ.
ಒಟ್ಟಾರೆ ಸತ್ಯಾಂಶ ಏನೇ ಇರಲಿ ಭಾರತೀಯರು ಕೋಳಿ ತಿನ್ನುವ ಮುನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ.

Write A Comment