ರಾಷ್ಟ್ರೀಯ

ಹೊಸ ಪಕ್ಷ ಕಟ್ಟಲು ಮುಂದಾದ ಯಾದವ್ ಮತ್ತು ಭೂಷಣ್

Pinterest LinkedIn Tumblr

Delhi-New-Party

ನವದೆಹಲಿ, ಮಾ.31- ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದಿಂದ ಅಮಾನತುಗೊಂಡಿರುವ ಯೋಗೀಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಏ.14ರಂದು ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ಈ ಇಬ್ಬರು ನಾಯಕರು ಸಮಾನ ಮನಸ್ಕರ ಜತೆ ಒಗ್ಗೂಡಿ ಹೊಸ ಪಕ್ಷ ಕಟ್ಟಲು ತೀರ್ಮಾನಿಸಿದ್ದಾರೆ ಎಂದು ಆಪ್ತ ಮೂಲಗಳು ಖಚಿತಪಡಿಸಿವೆ. ಆಮ್ ಆದ್ಮಿಯ ದೆಹಲಿ ಮುಖಂಡರ ವರ್ತನೆಯಿಂದ ಬೇಸತ್ತಿರುವ ವಿವಿಧ ರಾಜ್ಯಗಳ ಬಂಡಾಯಗಾರರು ಯೋಗೀಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಸಂಪರ್ಕದಲ್ಲಿದ್ದಾರೆ.

ಈ ಎಲ್ಲಾ ಸಮಾನ ಮನಸ್ಕರು ಹೊಸ ಪಕ್ಷ ಕಟ್ಟಲು ಚಿಂತನ-ಮಂಥನ ನಡೆಸಿದ್ದು, ಏ.14ರಂದು ನೂತನ ಪಕ್ಷದ ಹೆಸರು ಚಿಹ್ನೆ , ಧ್ಯೇಯೋದ್ದೇಶ ಸೇರಿದಂತೆ ಮತ್ತಿತರ ಅಂಶಗಳು ಅಂದೇ ಹೊರ ಬೀಳಲಿದೆ.

ಯಾದವ್ ಹಾಗೂ ಭೂಷಣ್‌ಗೆ ಎಎಪಿಯಿಂದ ಹೊರ ಬಂದಿರುವ ಅಡ್ಮಿರಲ್ ಎಲ್.ರಾಮದಾಸ್, ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಸೇರಿದಂತೆ ಮಾಜಿ ಶಾಸಕರು , ಮುಖಂಡರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ನಾನು ಯಾವ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವ ಧ್ಯೇಯೋದ್ದೇಶ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೆನೋ ಅದೇ ಕಾರಣಕ್ಕಾಗಿ ಮುಂದುವರೆಯುತ್ತೇನೆ. ಎಎಪಿಯಲ್ಲಿ ಮುಂದುವರೆಯುವುದು ಸೇರಿದಂತೆ ಹೊಸ ಪಕ್ಷ ಕಟ್ಟುವ ಚಿಂತನೆ ಮುಕ್ತವಾಗಿದೆ ಎಂದು ಯೋಗೀಂದ್ರ ಯಾದವ್ ತಮ್ಮ ಆಪ್ತರಿಗೆ ತಿಳಿಸಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಈಗಿರುವ ಎಎಪಿಯನ್ನೇ ಯಾದವ್ ಬಣ ತಮಗೆ ನೀಡಬೇಕೆಂಬ ವಾದ ಮುಂದಿಟ್ಟುಕೊಂಡು ಕಾನೂನು ಸಮರ ಸಾರಲು ಮುಂದಾಗಿದೆ. ಚುನಾವಣಾ ಆಯೋಗಕ್ಕೆ ಈ ಸಂಬಂಧ ಪತ್ರ ಬರೆಯಲು ತೀರ್ಮಾನಿಸಿರುವ ತಮಗೆ ಎಎಪಿ ಮಾನ್ಯತೆಯನ್ನು ನೀಡಬೇಕು ಎಂದು ಕೋರಲಿದ್ದಾರೆ.

Write A Comment