ಹೊಸದಿಲ್ಲಿ: ಸೋನಿಯಾಗಾಂಧಿ ಬಿಳಿ ಚರ್ಮದ ಬಗ್ಗೆ ವಿವಾದಾತ್ಮಕ ಟೀಕೆ ಮಾಡಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ನಿವಾಸದ ಮುಂದೆ ಗುರುವಾರ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಪ್ರತಿಭಟನೆ ನಡೆಸಿದೆ.
ಸೋನಿಯಾಗಾಂಧಿ ಅವರು ಬಿಳಿ ಚರ್ಮದವರಾಗಿರದೇ ಹೋಗಿದ್ದರೆ, ಅವರ ನಾಯಕತ್ವವನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿತ್ತಾ ಎನ್ನುವ ಹೇಳಿಕೆ ಮೂಲಕ ಇನ್ನೊಂದು ವಿವಾದವನ್ನು ಮೈಗೆ ಸುತ್ತಿಕೊಂಡಿದ್ದ ಗಿರಿರಾಜ್ ಸಿಂಗ್ ವಿರುದ್ಧ ಕಾಂಗ್ರೆಸಿಗರ ಆಕ್ರೋಶ ಮೂರನೇ ದಿನವೂ ಮುಂದುವರಿದಿದೆ.
ಸಚಿವ ಗಿರಿರಾಜ್ ಸಿಂಗ್ ವಾಸವಿರುವ ವಿಠ್ಠಲ ಭಾಯಿ ಪಟೇಲ್ ಹೌಸ್ ಸಂಕೀರ್ಣದ ಮುಂದೆ ಸೇರಿರುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಸಿಂಗ್ ವಿರುದ್ಧ ಘೋಷಣೆ ಕೂಗಿದರು.
ತಮ್ಮ ಮಾತು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಬುಧವಾರ ಕ್ಷಮೆ ಕೋರಿದ್ದ ಸಿಂಗ್, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ನಿನ್ನೆ ಸಂಜೆಯೇ ಬೆಂಗಳೂರಿಗೆ ತೆರಳಿದ್ದರು.
ಈ ನಡುವೆ ಬೆಂಗಳೂರು, ಮುಂಬಯಿಯಲ್ಲೂ ಕಾಂಗ್ರೆಸಿಗರು ಸಿಂಗ್ ಹೇಳಿಕೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಕೃತಿ ದಹನ ಯತ್ನಕ್ಕೆ ತಡೆ:
ಕಾಂಗ್ರೆಸಿಗರು ಗುರುವಾರ ಪ್ರತಿಭಟನೆ ಶುರುಮಾಡಿದ ಕೆಲವೇ ಹೊತ್ತಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರಿಂದ ಬ್ಯಾನರ್‌ಗಳನ್ನು ಕಿತ್ತುಕೊಂಡರಲ್ಲದೆ, ಸಿಂಗ್ ಅವರ ಪ್ರತಿಕೃತಿ ದಹನದ ಪ್ರಯತ್ನವನ್ನು ತಡೆದರು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸ್ ಬಸ್‌ಗೆ ಹತ್ತಿಸಿ ಕರೆದೊಯ್ಯಲಾಯಿತು.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಬಗ್ಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಹಾಯಕ ಸಚಿವ ಗಿರಿರಾಜ್ ಸಿಂಗ್, ಜನಾಂಗೀಯ ಟೀಕೆ ಮಾಡಿದ್ದಕ್ಕೆ ಎಲ್ಲೆಡೆಯಿಂದ ಆಕ್ರೋಶ ಹೊರಹೊಮ್ಮಿದೆ. ” ಒಂದು ವೇಳೆ ಬಿಳಿ ತ್ವಚೆ ಮಹಿಳೆ ಬದಲಿಗೆ ರಾಜೀವ್ ಗಾಂಧಿ ನೈಜೀರಿಯಾ ಸ್ತ್ರೀಯನ್ನು ಮದುವೆಯಾಗಿದ್ದರೆ, ಆಕೆಯನ್ನು ತಮ್ಮ ನಾಯಕಿಯೆಂದು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿತ್ತಾ?” ಎಂದು ಸುದ್ದಿಗಾರರ ಜತೆ ಮಾತನಾಡುತ್ತಾ ಗಿರಿರಾಜ್ ಸಿಂಗ್ ವ್ಯಂಗ್ಯವಾಡಿದ್ದರು. ಮಂಗಳವಾರ ನೀಡಿದ್ದ ಈ ವಿವಾದಾತ್ಮಕ ಹೇಳಿಕೆ ದೇಶದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿತ್ತು.