ಮೆಲ್ಬೋರ್ನ್, ಏ.2: ಸುಮಾರು 29 ವರ್ಷದ ಭಾರತೀಯ ಟೆಕ್ಕಿಯೊಬ್ಬ ಮೂರನೆ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯ ರಾಜಧಾನಿ ಸಿಡ್ನಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಇಂದು ಬೆಳಗಿನ ಜಾವ 2 ಗಂಟೆ ಸಮಯದಲ್ಲಿ ಪಂಕಜ್ ನಾ ಎಂಬ ಟೆಕ್ಕಿ ಮಕ್ವಾರಿ ಪಾರ್ಕ್‌ನಲ್ಲಿನ ಅಪಾರ್ಟ್‌ಮೆಂಟ್‌ವೊಂದರ ಮೂರನೆ ಮಹಡಿಯ ಬಾಲ್ಕನಿಯಲ್ಲಿ ನಿಂತು ಭಾರತದಲ್ಲಿರುವ ತನ್ನ ಪತ್ನಿ ಜತೆ ಮಾತನಾಡುತ್ತಿದ್ದ. ಆಗ ಇದ್ದಕ್ಕಿದ್ದಂತೆ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಸುದ್ದಿ ತಿಳಿದ ತಕ್ಷಣ ತುರ್ತುಸೇವೆಗಳ ಘಟಕದ ಸಿಬ್ಬಂದಿ ಸ್ಥಳಕ್ಕೆ ದಾವಿಸಿದ್ದಾರೆ.
ಆದರೆ, ಬಿದ್ದ ಪಂಕಜ್ ಆ ವೇಳೇಗಾಗಲೇ ಸಾವನ್ನಪ್ಪಿದ್ದಾನೆ. ಪಂಕಜ್ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು ಎಂದು ವೈದ್ಯರು ಹೇಳಿದ್ದಾರೆ. ಅವನು ಮಾತನಾಡುತ್ತಿದ್ದ ಮೊಬೈಲ್ ಸೆಟ್ ಕೂಡ ಅವನ ಬದಿಯಲ್ಲೇ ಬಿದ್ದಿತ್ತು. ಪಂಕಜ್ ಇಲ್ಲಿನ ಭಾರತ ಮೂಲದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಭಾರತದಲ್ಲಿ ಮದುವೆ ಮಾಡಿಕೊಂಡು ಇತ್ತೀಚೆಗಷ್ಟೆ ಪಂಕಜ್ ಇಲ್ಲಿಗೆ ಹಿಂದಿರುಗಿದ್ದ ಎಂದು ಕಂಪೆನಿ ಮ್ಯಾನೇಜರ್ ಕರೇನ್‌ವಾಲರ್ ತಿಳಿಸಿದ್ದಾರೆ.