ಚಂಡೀಗಢ, ಏ.2: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ನಡುವಣ ಭೂ ವ್ಯವಹಾರವನ್ನು ರದ್ದು ಮಾಡಿದ್ದ ಖಡಕ್ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರನ್ನು ಹರಿಯಾಣ ಸರ್ಕಾರವು ಪುನಃ ಎತ್ತಂಗಡಿ ಮಾಡಿದ್ದು, ಈ ಅಧಿಕಾರಿ ತನ್ನ ಸೇವಾವಧಿಯಲ್ಲಿ ವರ್ಗಾವಣೆಯಾಗುತ್ತಿರುವುದು ಇದು ಬರೋಬ್ಬರಿ 46ನೆ ಬಾರಿ! 23 ವರ್ಷಗಳ ಅವರ ಸೇವಾವಧಿಯಲ್ಲಿ ಅವರನ್ನು ವಿವಿಧ ಇಲಾಖೆಗಳಿಗೆ ಈ ಮೊದಲು 45 ಬಾರಿ ವರ್ಗಾವಣೆ ಮಾಡಲಾಗಿತ್ತು. ಈಗ ಹರಿಯಾಣದ ಬಿಜೆಪಿ ಸರ್ಕಾರ ಈ ಖಡಕ್ ಅಧಿಕಾರಿಯನ್ನು 46ನೆ ಬಾರಿ ಪುರಾತತ್ವ ಮತ್ತು ಪ್ರಾಚ್ಯ ವಸ್ತು ಸಂಗ್ರಹಾಲಯಗಳ ಇಲಾಖೆಗೆ ಎತ್ತಂಗಡಿ ಮಾಡಿದೆ.
ರಾಬರ್ಟ್ ವಾದ್ರಾ ಭೂ ಹಗರಣ ಬಯಲಿಗೆಳೆದ ಹಿನ್ನೆಲೆಯಲ್ಲಿ 2012ರಲ್ಲಿ ಕಾಂಗ್ರೆಸ್ ಸರ್ಕಾರ ಖೇಮ್ಕಾರನ್ನು ಬೇರೆ ಇಲಾಖೆಗೆ ವರ್ಗಾ ಮಾಡಿತ್ತು. ಈಗ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಮನೋಹರ್ ಖಟಲ್ ಖೇಮ್ಕಾರನ್ನು ಯಾವುದೋ ನಗಣ್ಯ ಇಲಾಖೆಗೆ ಎತ್ತಂಗಡಿ ಮಾಡಿದ್ದರು. ಈಗ ಮತ್ತೆ ಈ 49 ವರ್ಷದ ಐಎಎಸ್ ಅಧಿಕಾರಿಯನ್ನು 23 ವರ್ಷಗಳ ಅವಧಿಯಲ್ಲಿ ಖಟರ್ ಅವರು ಖೇಮ್ಕಾರನ್ನು 46ನೆ ಬಾರಿ ಅಂದರೆ ಸರಾಸರಿ 6 ತಿಂಗಳಿಗೊಮ್ಮೆಯಂತೆ ಎತ್ತಂಗಡಿ ಮಾಡಿದ್ದಾರೆ.