ನವದೆಹಲಿ, ಏ.4: ಶುಭ ಶುಕ್ರವಾರದ ದಿನ ನ್ಯಾಯಾಧೀಶರ ಸಮಾವೇಶ ಕರೆದಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ಕ್ರಮದ ವಿರುದ್ಧ ಧ್ವನಿ ಎತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಕುರಿಯನ್ ಜೋಸೆಫ್, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಶನಿವಾರ ಪ್ರಧಾನಿ ಮೋದಿ ಕರೆದಿದ್ದ ಔತಣಕೂಟದ ಕರೆಯೋಲೆಯನ್ನು ನಿರಾಕರಿಸಿರುವ ನ್ಯಾಯಾಧೀಶ ಕುರಿಯನ್, ಇಂತಹ ಪ್ರಮುಖ ಹಬ್ಬಗಳಂದು ಯಾವುದೇ ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದಿದ್ದಾರೆ.
ಧಾರ್ಮಿಕ ಹಬ್ಬ ಆಚರಣೆಯ ದಿನಗಳಂದು ಯಾವ ಕಾರ್ಯಕ್ರಮಗಳನ್ನೂ ನಡೆಸಬಾರದು, ಭಾರತೀಯ ಜಾತ್ಯಾತೀತ ವ್ಯವಸ್ಥೆಯ ರಕ್ಷಕರಾಗಿರುವ ನೀವು ಈ ಬಗ್ಗೆ ಸೂಕ್ತವಾದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ನಾನು ನಿಮ್ಮಲ್ಲಿ ವಿನಂತಿಸುವೆ. ಎಲ್ಲಾ ಧರ್ಮಗಳ ಮಹತ್ವದ ದಿನಗಳನ್ನು ಗೌರವಿಸಬೇಕು. ಅದಕ್ಕಾಗಿಯೇ ಅಂಥಾ ದಿನಗಳನ್ನು ರಾಷ್ಟ್ರೀಯ ರಜಾ ದಿನಗಳೆಂದು ಘೋಷಿಸಲಾಗಿದೆ.
ಗುಡ್‌ಫ್ರೈಡೇ, ಹೋಲಿ, ಈದ್ ಹೀಗೆ ಯಾವುದೇ ಧರ್ಮದ ಪವಿತ್ರ ದಿನಗಳಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸರಿಯಲ್ಲ ಎಂದು ನ್ಯಾ.ಕುರಿಯನ್ ಜೋಸೆಫ್ ಅವರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಗುಡ್‌ಫ್ರೈ ಡೇ ಯಿಂದ ಈಸ್ಟರ್ ಸಂಡೆವರೆಗೂ ಮೂರು ದಿನ ಪವಿತ್ರ ಹಬ್ಬ. ಈ ದಿನಗಳಲ್ಲಿ ಸಮ್ಮೇಳನ ಸಲ್ಲ ಎಂದು ಕುರಿಯನ್ ಅವರು, 24 ಹೈಕೋರ್ಟ್ ಜಡ್ಜ್‌ಗಳಿಗೂ ಪತ್ರ ಬರೆದಿದ್ದಾರೆ. ಮುಖ್ಯ ನ್ಯಾಯಾಧೀಶರು ಕರೆದಿರುವುದು ಅತ್ಯಂತ ಮಹತ್ವದ ಸಮಾವೇಶ. ಅದರಲ್ಲಿ ನಾವು ಭಾಗವಹಿಸಲೇಬೇಕಾಗುತ್ತದೆ. ಹಾಗಾಗಿ ಸಮಾವೇಶವನ್ನು ಹಬ್ಬದ ಸಮಾವೇಶಗಳನ್ನು ದಿನಗಳಲ್ಲಿ ನಡೆಸಿದರು, ಎರಡನ್ನೂ ಬಿಡುವಂತಿಲ್ಲ. ಇದೊಂದು ರೀತಿಯ ಇಬ್ಬಂದಿಯಾಗುತ್ತದೆ. ಈ ಬಗ್ಗೆ ತಾವು ಗಮನಹರಿಸಬೇಕು ಎಂದು ಜೋಸೆಫ್ ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ನಾನು ಈ ಮೂಲಕ ಯಾವುದೇ ಮತೀಯ ಭಾವನೆಗಳನ್ನು ಪ್ರಚೋದಿಸುತ್ತಿಲ್ಲ. ದೀವಳಿ, ದುಶೇರಾ, ಹೋಳಿ, ಈದ್, ಗುಡ್‌ಫ್ರೈಡೇ ಯಂತಹ ಮಹತ್ವದ ದಿನಗಳಲ್ಲಿ ಈ ರೀತಿಯ ಗಂಭೀರ ಕಾರ್ಯಕ್ರಮಗಳ ಆಯೋಜಿಸಬಾರದು ಎಂದು ನ್ಯಾ.ಕುರಿಯನ್, ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.