ರಾಷ್ಟ್ರೀಯ

ನಕಲಿ ಹಾವಳಿ ತಯಾರಿಕೆ ಉದ್ಯಮ ತತ್ತರ

Pinterest LinkedIn Tumblr

vpec15com-duplicate

-ಸಚ್ಚಿದಾನಂದ ಕುರಗುಂದ
ನಕಲಿ ಉತ್ಪನ್ನಗಳ ತಯಾರಕರು, ಮಾರಾಟಗಾರರ ಜಾಲ ದೊಡ್ಡದಾಗುತ್ತಲೇ ಇದೆ. ಬ್ರ್ಯಾಂಡೆಡ್‌ ಕಂಪೆನಿಗಳು ಸೇರಿದಂತೆ ದೇಶದ ತಯಾರಿಕಾ ಉದ್ಯಮ ಕ್ಷೇತ್ರಕ್ಕೆ ಇದು ಮಾರಕವಾಗಿದ್ದರೆ, ಇನ್ನೊಂದೆಡೆ ಸರ್ಕಾರದ ತೆರಿಗೆ ವರಮಾನ ಮೂಲಕ್ಕೂ ಪೆಟ್ಟು ನೀಡುತ್ತಿದೆ.  ಗ್ರಾಹಕರಿಗೂ ಭಾರಿ ನಷ್ಟವನ್ನುಂಟು ಮಾಡುತ್ತಿದೆ. ಹೊಸ ವಸ್ತು ಖರೀದಿಸಿದ ಖುಷಿಯೇ ಇಲ್ಲದಂತೆ ಮಾಡುತ್ತಿದೆ. ಇಂಥ ನಕಲಿ ಉತ್ಪನ್ನಗಳ ಮಾರುಕಟ್ಟೆ ಕುರಿತ   ಮಾಹಿತಿ ಇಲ್ಲಿದೆ.

ಕಲಿ ಬಿಡಿಭಾಗಗಳ ಹಾವಳಿ ದೇಶದ ತಯಾರಿಕಾ ಉದ್ಯಮ ವಲಯಕ್ಕೆ ಭಾರಿ ಪೆಟ್ಟು ನೀಡುತ್ತಿದೆ. ದೇಶದಾದ್ಯಂತ ಇದೊಂದು ವ್ಯಾಪಕ ಜಾಲವಾಗಿ ಮಾರ್ಪಟ್ಟಿದೆ. ನಕಲಿ ಉತ್ಪನ್ನಗಳ ಹಾವಳಿಯಿಂದಾಗಿಯೇ ದೇಶದ ತಯಾರಿಕಾ ಉದ್ಯಮ ಕ್ಷೇತ್ರಕ್ಕೆ ಮತ್ತು ವಿವಿಧ ಉತ್ಪನ್ನಗಳ ಮಾರುಕಟ್ಟೆಗೆ ಕಳೆದ ವರ್ಷ ರೂ1 ಲಕ್ಷ ಕೋಟಿಗೂ ಅಧಿಕ ಪ್ರಮಾಣದಲ್ಲಿ ಹಾನಿಯಾಗಿರುವುದೇ ಇದಕ್ಕೆ ಸಾಕ್ಷಿ.

ದೇಶದ ಕೈಗಾರಿಕಾ ರಂಗದಲ್ಲಿನ ವಿವಿಧ ಏಳು ಉತ್ಪಾದನಾ ವಲಯಗಳಲ್ಲಿ ನಡೆಸಿದ ವ್ಯಾಪಕ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ. ವಾಹನಗಳ ಬಿಡಿಭಾಗಗಳು, ಕಂಪ್ಯೂಟರ್‌ ಹಾರ್ಡ್‌ವೇರ್‌, ಎಫ್‌ಎಂಸಿಜಿ, ವೈಯಕ್ತಿಕ ಬಳಕೆ ಸಾಮಗ್ರಿಗಳು, ಮೊಬೈಲ್‌ ಫೋನ್‌ ಮತ್ತು ಅದರ ವಿವಿಧ ಸಲಕರಣೆಗಳನ್ನು ಮೂಲ ಕಂಪೆನಿಗಳ ಉತ್ಪನ್ನದಂತೆಯೇ ನಕಲಿ ಮಾಡಿ ಮಾರಾಟ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ಅಷ್ಟೇ ಅಲ್ಲ, ಅಸಲಿ ಉತ್ಪನ್ನಗಳನ್ನೂ ನಾಚಿಸುವಂತೆ ಈ ನಕಲಿ ಸಾಮಗ್ರಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಲ್ಲಿ ‘ನಕಲಿ’ ಘಟಕಗಳು ಸಿದ್ಧಹಸ್ತ ಎನಿಸಿಬಿಟ್ಟಿವೆ. ವಾಹನ ಬಿಡಿಭಾಗ, ಕಂಪ್ಯೂಟರ್‌ ಬಿಡಿಭಾಗಗಳನ್ನಷ್ಟೇ ಅಲ್ಲ, ಮದ್ಯ ಮತ್ತು ತಂಬಾಕು ಉತ್ಪನ್ನಗಳನ್ನೂ ನಕಲಿಯಾಗಿ ತಯಾರಿಸಿ ಮಾರಾಟ ಮಾಡುವುದರಲ್ಲಿ ದೇಶದ ಕೆಲವು ಭಾಗಗಳ ಜನರು ಪಳುಗಿಬಿಟ್ಟಿದ್ದಾರೆ.

ದೇಶದಲ್ಲಿ ಸದ್ಯ ‘ಭಾರತದಲ್ಲಿ ತಯಾರಿಸಿ’ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿದೆ. ತಯಾರಿಕಾ ಉದ್ಯಮ ವಲಯಕ್ಕೆ ಹೊಸದಾಗಿ ಕೈಗಾರಿಕೆಗಳು ಪ್ರವೇಶಿಸುವುದಿರಲಿ ಈಗ ಚಟುವಟಿಕೆಯಲ್ಲಿರುವ ಕಾರ್ಖಾನೆಗಳು ಈ ನಕಲಿ ಉತ್ಪನ್ನಗಳ ಜಾಲದಲ್ಲಿ ಉಳಿದು ಬೆಳೆಯುವುದೇ ಕಷ್ಟದ ಮಾತಾಗಿಬಿಟ್ಟಿದೆ.

ಇಂತಹ ಬಲಾಡ್ಯ ‘ನಕಲಿ ಉದ್ಯಮ’ದ ಹಾವಳಿಗಳ ಬಗ್ಗೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಇತ್ತೀಚೆಗೆ ಅಧ್ಯಯನ ನಡೆಸಿ ವರದಿ ಪ್ರಕಟಿಸಿದೆ. ಆ ವರದಿ ಪ್ರಕಾರವೇ ದೇಶದಲ್ಲಿ ಸದ್ಯ ನಕಲಿ ಮಾರುಕಟ್ಟೆಯು ಅಸಲಿ ಉತ್ಪನ್ನಗಳ ರೂ1 ಲಕ್ಷ ಕೋಟಿಗೂ ಅಧಿಕ ಪ್ರಮಾಣದ ಮಾರುಕಟ್ಟೆಯನ್ನು ಲೂಟಿ ಮಾಡಿಬಿಟ್ಟಿದೆ.

ಈ ಏಳು ವಲಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಿನ ನಷ್ಟದ ಪ್ರಮಾಣದಲ್ಲಿಯೇ ಶೇಕಡ 44.4ರಷ್ಟು ಹೆಚ್ಚಳ ಕಂಡುಬಂದಿದೆ. ಅಂದರೆ, ಅಷ್ಟೊಂದು ವೇಗವಾಗಿ ಈ ನಕಲಿ ಉತ್ಪನ್ನಗಳ ಮಾರುಕಟ್ಟೆ ಬೆಳವಣಿಗೆ ಕಾಣುತ್ತಿದೆ.

ಅಂದರೆ, 2011–12ನೇ ಹಣಕಾಸು ವರ್ಷದಲ್ಲಿ ನಕಲಿ ಸಾಮಗ್ರಿಗಳ ಅಬ್ಬರದಿಂದಾಗಿಯೇ ಅಸಲಿ ಉಪಕರಣಗಳಿಗೆ ರೂ72,969 ಕೋಟಿಗಳಷ್ಟು ದೊಡ್ಡ ಮಟ್ಟದ ಮಾರಾಟವೇ ಕೈತಪ್ಪಿದೆ. ನಂತರದ ಎರಡು ವರ್ಷಗಳಲ್ಲಿ ಅಂದರೆ, 2013–14ನೇ ಹಣಕಾಸು ವರ್ಷದಲ್ಲಿ ಇದರ ಪ್ರಮಾಣ ರೂ1,05,381 ಕೋಟಿಗೆ ಹೆಚ್ಚಳ ಕಂಡಿದೆ. ಅಂದರೆ, ನಕಲಿ ಉತ್ಪನ್ನಗಳ ಮಾರಾಟದಲ್ಲೂ ಭಾರಿ ಪ್ರಗತಿಯೇ ಕಾಣಬರುತ್ತಿದೆ.

ತೆರಿಗೆಯಲ್ಲೂ ನಷ್ಟ
ನಕಲಿ ಉತ್ಪನ್ನಗಳ ಹಾವಳಿ ಒಂದೆರಡಲ್ಲ. ಒಂದೆಡೆ ಮೂಲ ಉತ್ಪಾದಕರಿಗೆ, ಬ್ರ್ಯಾಂಡೆಡ್‌ ಕಂಪೆನಿಗಳಿಗೆ ಮಾರುಕಟ್ಟೆ ನಷ್ಟವಾಗಿದ್ದರೆ, ಇನ್ನೊಂದೆಡೆ ಸರ್ಕಾರಕ್ಕೆ ಸಲ್ಲಿಕೆಯಾಗಬೇಕಾದ ಮಾರಾಟ ತೆರಿಗೆಗೂ ಪೆಟ್ಟು ಬೀಳುತ್ತಿದೆ.

ಅಂದರೆ, ಮಾರಾಟವಾಗುವ ವಸ್ತುವೇ  ನಕಲಿ ಆಗಿರುವಾಗ ಅದಕ್ಕೆ ರಶೀದಿಯ ಗೋಜಿರುವುದಿಲ್ಲ. ರಶೀದಿಯೇ ಇಲ್ಲದ ಮೇಲೆ ತೆರಿಗೆಯೂ ಸಂಗ್ರಹವಾಗುವುದಿಲ್ಲ. ಹೀಗೆ, ನಕಲಿ ವಸ್ತುಗಳ ಮಾರುಕಟ್ಟೆಯಿಂದಾಗಿ, 2012ರಲ್ಲಿ ತೆರಿಗೆ ಇಲಾಖೆಗೆ ಬರಬೇಕಾದ ರೂ26,190 ಕೋಟಿಗಳಷ್ಟು ಹಾಗೂ 2014ರಲ್ಲಿ ರೂ39,239 ಕೋಟಿಗಳಷ್ಟು ತೆರಿಗೆಯೇ ಕೈತಪ್ಪಿದಂತಾಗಿದೆ. ಅಂದರೆ, ಈ ನಕಲಿ ಉತ್ಪನ್ನಗಳ ಬದಲು ಅಸಲಿ ಉಪಕರಣಗಳು ಮಾರಾಟವಾಗಿದ್ದರೆ ಇಷ್ಟು ದೊಡ್ಡ ಮೊತ್ತದ ತೆರಿಗೆ ಸಂಗ್ರಹವಾಗುತ್ತಿತ್ತು ಅಲ್ಲವೇ?

ನಕಲಿ ಮೇಲೆ ದಾಳಿ
‘ದೇಶದಲ್ಲಿ ಹಲವು ರೀತಿಯ ಕಾನೂನುಗಳು ಅಸ್ತಿತ್ವದಲ್ಲಿವೆ. ಪೊಲೀಸರು ಸಹ ಆಗಾಗ ನಕಲಿ ಉತ್ಪನ್ನಗಳ ಮಾರುಕಟ್ಟೆ ಮೇಲೆ ದಾಳಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ. ಆದರೆ, ಅಗಾಧವಾಗಿರುವ ನಕಲಿ ಉತ್ಪನ್ನಗಳ ವಹಿವಾಟಿನ ಮಾರುಕಟ್ಟೆಯನ್ನು ನಿಯಂತ್ರಿಸಲು ಇದಿಷ್ಟರಿಂದಲೇ ಸಾಧ್ಯವಾಗದು. ಹೀಗಾಗಿ ನಕಲಿ ಉತ್ಪನ್ನಗಳನ್ನು ತಯಾರಿಸುವವರು,  ಸಾಗಣೆ ಮಾಡುವವರು, ಮಾರಾಟ ಮಾಡುವವರ ಸಂಪರ್ಕ ಜೋರಾಗಿಯೇ ಇದೆ. ಈ ಕರಾಳ ಮಾರುಕಟ್ಟೆಯ ದೊಡ್ಡ ಜಾಲದ ಅಸ್ತಿತ್ವ ಮುಂದುವರಿಯುತ್ತಾ ಬಂದಿದೆ.  ದೇಶದಲ್ಲಿ ಇಂತಹ ವಹಿವಾಟು ನಡೆಸುವ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿರುವುದೇ  ಕಡಿಮೆ. ಹೀಗಾಗಿ ನಕಲಿ ಉತ್ಪನ್ನಗಳ ವಹಿವಾಟು ಮುಂದುವರಿಯುತ್ತಿದೆ’ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವರದಿ ತಿಳಿಸಿದೆ.

ಮದ್ಯ ತಯಾರಿಕೆ ಮತ್ತು ಮೊಬೈಲ್‌ ದೂರವಾಣಿ ಉದ್ಯಮದಲ್ಲಿಯಂತೂ ನಕಲಿ ಉತ್ಪನ್ನಗಳ ಮಾರಾಟ ಅಪಾರ ಪ್ರಮಾಣದಲ್ಲಿದೆ. ಈ ಎರಡು ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 151ರಷ್ಟು ಪ್ರಮಾಣದಲ್ಲಿ ನಕಲಿ ವಹಿವಾಟು ಹೆಚ್ಚುತ್ತಿದೆ.

ನಕಲಿ ಉತ್ಪನ್ನಗಳ ಸಾಗಣೆ, ವಹಿವಾಟನ್ನು ನಿಯಂತ್ರಿಸುವುದು ಸರ್ಕಾರಿ ಆಡಳಿತ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಇದರಿಂದ ಕೈಗಾರಿಕೆಗಳು ಮಾರಾಟದಲ್ಲಿ ಕುಸಿತ ಅನುಭವಿಸುತ್ತಿದ್ದು, ವರಮಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಜತೆಗೆ ಆಯಾ ಕಂಪೆನಿಗಳ ಉತ್ಪನ್ನಗಳ ವಿಶ್ವಾಸಾರ್ಹತೆಗೂ ಧಕ್ಕೆಯಾಗುತ್ತಿದೆ. ಗ್ರಾಹಕರರು ಸಹ ಕಳಪೆ ಉತ್ಪನ್ನಗಳನ್ನು ಖರೀದಿಸಿ ವಂಚನೆಗೆ ಒಳಗಾಗುತ್ತಾರೆ. ಇಂತಹ ಉತ್ಪನ್ನಗಳು ಆರೋಗ್ಯ ಮತ್ತು ಸುರಕ್ಷತೆಯಿಂದ ದೃಷ್ಟಿಯಿಂದ ಹಾನಿಕಾರಕವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಪಾರ ಪ್ರಮಾಣದಲ್ಲಿ ವಾಹನಗಳ ಬಿಡಿಭಾಗಗಳು  ನಕಲಿಯಾಗಿ ತಯಾರಾಗುವುದನ್ನು ತಡೆಗಟ್ಟಲು ಸರ್ಕಾರಿ ವ್ಯವಸ್ಥೆಯನ್ನಷ್ಟೇ ನೆಚ್ಚಿಕೊಳ್ಳದೇ ಕೆಲವು ಕಂಪೆನಿಗಳು ಸ್ವತಃ ಕಾರ್ಯಾಚರಣೆ ಆರಂಭಿಸಿವೆ. ಕಳೆದ ವರ್ಷ ಮುಂಬೈ, ಥಾಣೆ, ಪುಣೆ, ನಾಗ್ಪುರ ಮೊದಲಾದೆಡೆ ಕಂಪೆನಿಗಳ ತನಿಖಾ ತಂಡವೇ ದಾಳಿ ನಡೆಸಿ ನಕಲಿ ಬಿಡಿಭಾಗ ಮಾರಾಟ ಜಾಲವನ್ನು ಭೇದಿಸಿದ್ದರು.

ಕಂಪೆನಿಗಳೇ ಜವಾಬ್ದಾರಿ ವಹಿಸಿಕೊಳ್ಳಬೇಕು
‘ನಕಲಿ ಬಿಡಿಭಾಗಗಳ ಹಾವಳಿ ದಕ್ಷಿಣ ಭಾರತದಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ. ಉತ್ತರ ಭಾರತದಲ್ಲಿ ಮಾತ್ರ ಇದು ವ್ಯಾಪಕವಾಗಿದೆ. ಮುಖ್ಯವಾಗಿ ನಕಲಿ ಬಿಡಿಭಾಗಗಳು ತಯಾರಾಗದಂತೆ ಕಂಪೆನಿಗಳೇ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗಿದೆ. ಅಸಲು ಮತ್ತು ನಕಲಿ ಉತ್ಪನ್ನಗಳ ವ್ಯತ್ಯಾಸದ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಬೇಕು. ನಕಲಿ ಬಿಡಿಭಾಗಗಳನ್ನು ಖರೀದಿಸುವ ಗ್ರಾಹಕರು ಇದು ಉತ್ತಮವಾಗಿಲ್ಲ ಎಂದು ಅಭಿಪ್ರಾಯ ಪಟ್ಟರೆ ಕಂಪೆನಿಗೆ ಕೆಟ್ಟ ಹೆಸರು ಮತ್ತು ಅದಕ್ಕೆ  ನಷ್ಟವಾಗು ತ್ತದೆ. ಆದ್ದರಿಂದ ಸರ್ಕಾರಿ ತನಿಖಾ ಸಂಸ್ಥೆಗಳಿಗಿಂತ ಕಂಪೆನಿಗಳು ಜವಾಬ್ದಾರಿ ವಹಿಸಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ’
– ಪ್ರಕಾಶ್‌ ರಾಯ್ಕರ್‌, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ

Write A Comment