ರಾಷ್ಟ್ರೀಯ

ಭಯ, ಭಯ ಅಗೋರಾಫೋಬಿಯಾ!

Pinterest LinkedIn Tumblr

bhec04bhaya

– ಡಾ.ಕೆ.ಎಸ್. ಪವಿತ್ರ
‘ಹದಿನೈದು ವರ್ಷ ಆಯ್ತು ನಾನು ಹೊರಗೆ ಒಬ್ಬಳೇ ಹೋಗಿ. ಮನೇಲಿ ಒಬ್ಬಳೇ ಇರೋಕ್ಕೂ ಭಯ, ಲಿಫ್ಟ್ ಹತ್ತೋಕ್ಕೂ ಭಯ. ಬಾತ್‌ರೂಂಗೆ ಹೋದ್ರೆ ನನ್ನ ಮಗ ಏನಾದ್ರೂ ಕೀಟಲೆಯಿಂದ ಹೊರಗಿನ ಚಿಲಕ ಹಾಕ್ಬಿಟ್ರೆ? ಸಿನಿಮಾ ಥಿಯೇಟರ್‌ಗೆ ಹೋದ್ರೆ ನಾನು ಯಾವಾಗ್ಲೂ ಟಾರ್ಚ್ ತೆಗೆದುಕೊಳ್ಳದೇ ಹೋಗಿದ್ದೇ ಇಲ್ಲ. ಮೊದಲೇ ಬಾಗಿಲು ಎಲ್ಲೆಲ್ಲಿದೆ ಅಂತ ನೋಡ್ಕೊಳ್ಳೋದು, ಆ ಮೇಲೆ ಆದಷ್ಟು ಬಾಗಿಲ ಹತ್ತಿರನೇ ಕೂತ್ಕೊಳ್ಳೋದು. ಯಾರಿಗೂ ನನ್ನ ಭಯ ‘ನಿಜವಾದ್ದು’ ಅಂಥ ಅನ್ನಿಸೋದೇ ಇಲ್ಲ. ನನಗೂ ಯಾಕೆ ಹೀಗಾಗುತ್ತೆ ಅಂತ ಗೊತ್ತಾಗಲ್ಲ”.

ಹದಿನೈದು ವರ್ಷ ಗೃಹಬಂಧನದ ರೀತಿ ಮನೆಯ ಒಳಗೇ ಇದ್ದು, ಹೊರಗೆ ಹೋಗಲೇ ಹೆದರುತ್ತಿದ್ದ ಈ ಮಹಿಳೆ ನರಳುತ್ತಿದ್ದುದು ‘ಅಗೋರಾಫೋಬಿಯಾ’ ದಿಂದ. ಅಗೋರಾಫೋಬಿಯಾ ಒಂದು ಆತಂಕದ ತೊಂದರೆ. ಗ್ರೀಕ್ ಭಾಷೆಯ ‘ಅಗೋರಾ’ (agora), ಅಂದರೆ ಮಾರುಕಟ್ಟೆಯ ಸ್ಥಳದ, ಫೋಬಿಯಾ ಅಂದರೆ ಭಯ. ಮೊದಲು ತುಂಬಾ ಜನರಿರುವ ಸಾರ್ವಜನಿಕ ಸ್ಥಳದ ಭಯ ಎಂದು ಮನೋವೈದ್ಯಕೀಯ ವಿಜ್ಞಾನ ಇದನ್ನು ಪರಿಗಣಿಸಿತ್ತು. ಆದರೆ ಸಾಕಷ್ಟು ಅಧ್ಯಯನಗಳ ನಂತರ ‘ಅಗೋರಾಫೋಬಿಯಾ’ದ ಪರಿಕಲ್ಪನೆ ಬದಲಾಯಿತು.

ಒಬ್ಬ ವ್ಯಕ್ತಿಗೆ ಯಾವುದೇ ಒಂದು ಸ್ಥಳದಲ್ಲಿ ಹಠಾತ್ತನೇ ಒಂದು ರೀತಿಯ ಗಾಬರಿ, ಉಸಿರು ಕಟ್ಟಿದ ಅನುಭವ, ಎದೆ ಡವಡವನೆ ಹೊಡೆದುಕೊಳ್ಳುವುದು, ‘ಇನ್ನೇನು ಸತ್ತೇ ಹೋದೆ’, ‘ಏನೋ ಅತಿ ಕೆಟ್ಟದ್ದು ಜರುಗಲಿದೆ’ ಇಂಥ ಭಯ ಉಂಟಾಗುವುದು ಈ ರೀತಿಯ ಒಂದು ‘ಪ್ಯಾನಿಕ್ ಅಟ್ಯಾಕ್’ (panic attack)ನ ಅನುಭವ ಉಂಟಾದಾಗ, ನಂತರದ ದಿನಗಳಲ್ಲಿ ಅಂಥದೇ ಸನ್ನಿವೇಶ/ಸ್ಥಳಗಳಿಗೆ ಹೋಗಲು  ಭಯ ಆರಂಭವಾಗುತ್ತದೆ. ಹೀಗೆ ಆರಂಭವಾದ ಭಯ ಆತ ಮತ್ತೆ ಅಂಥ ಸ್ಥಳಗಳಿಗೆ ಹೋಗದಿರುವಂತೆ ತಡೆಯುತ್ತದೆ.

ಈ ಭಯವೇ ‘ಅಗೋರಾಫೋಬಿಯಾ’  ಆಗಿ ಕಾಡಲಾರಂಭಿಸುತ್ತದೆ. ಈ ‘ಪ್ಯಾನಿಕ್ ಅಟ್ಯಾಕ್’ ನಿಂದ ಜೀವಕ್ಕೆ  ಅಪಾಯವಿರುವುದಿಲ್ಲ. ಆದರೆ ಆ ‘ಕೆಲವೇ ನಿಮಿಷಗಳ’ ಅತಿ ಭಯ ವ್ಯಕ್ತಿಗೆ ಸಹಿಸಲು ಕಷ್ಟವಷ್ಟೇ ಅಲ್ಲ, ಸತ್ತು ಮತ್ತೆ ಬದುಕಿದ’ ಅನುಭವ ನೀಡುತ್ತದೆ. ಈ ಭಯ ಮಾಲ್‌ಗಳು, ರೇಲ್ವೆ ನಿಲ್ದಾಣ, ಚರ್ಚ್, ಸಿನಿಮಾ ಟಾಕೀಸ್, ಬಸ್ಸು, ರೈಲು, ವಿಮಾನದ ಒಳಗೆ, ಖಾಲಿ ಬೀದಿಗಳು, ಹೀಗೆ ಎಲ್ಲಿಯೂ ಆಗಬಹುದು.

ಅಗೋರಾಫೋಬಿಯಾ ಆರಂಭವಾಗುವುದು ಹಠಾತ್ತನೆ ಆದರೂ, ಅದು ಪೂರ್ಣ ಕಾಯಿಲೆಯ ರೂಪಕ್ಕೆ ಬರಲು, ‘ಇದು ಕಾಯಿಲೆ’ ಎಂದು ಗೊತ್ತಾಗಲು ವರುಷಗಳೇ ಆಗಬಹುದು. ಮೊದಲು ಯಾವುದೋ ಒಂದು ಸನ್ನಿವೇಶಕ್ಕೆ (ಉದಾಹರಣೆ ಲಿಫ್ಟ್‌ನಲ್ಲಿ ಮೇಲೆ ಹತ್ತುವುದು) ಸೀಮಿತವಾದ ಭಯ ಕ್ರಮೇಣ ಎಲ್ಲಾ ಸನ್ನಿವೇಶಗಳಿಗೂ ವಿಸ್ತರಿಸಿ, ವ್ಯಕ್ತಿ ಮನೆಯ ಹೊರಗೇ ಕಾಲಿಡದಂತೆ ಮಾಡಬಹುದು. ಅಂದರೆ ದೈನಂದಿನ ಚಟುವಟಿಕೆಗಳಿಗೂ (ಹಾಲು ತೆಗೆದುಕೊಂಡು ಬರುವುದು, ದಿನಪತ್ರಿಕೆ ಗೇಟಿನಿಂದ ಒಳಕ್ಕೆ ತರುವುದು ಇತ್ಯಾದಿ) ಭಯ ಕಾಡಬಹುದು.

ಯಾವುದೋ ಸನ್ನಿವೇಶದಲ್ಲಿ ‘ಪ್ಯಾನಿಕ್ ಅಟ್ಯಾಕ್’ ಇದ್ದಕ್ಕಿದ್ದಂತೆ ಬರಲು ಕಾರಣವೇನು ಎಂಬ ಪ್ರಶ್ನೆ ಸಹಜ. ಬಹಳಷ್ಟು ಅಂಶಗಳು ಇಲ್ಲಿ ಪ್ರಭಾವ ಬೀರಬಹುದು. ಜೀವನದ ಕಷ್ಟಗಳು, ಒತ್ತಡ ಎದುರಿಸಲು ಸಾಧ್ಯವಾಗದ ಅಸಮರ್ಥತೆ, ದೀರ್ಘಕಾಲಿಕ ಭಾವನಾತ್ಮಕ ಸಂಕಟಗಳು, ಇವುಗಳ ಗಂಭೀರತೆಯನ್ನು ಅರಿಯದೆ ಹಾಗೇ ಬೆಳೆದಾಗ ಅವು ಮೆದುಳಿನ ನರವ್ಯೂಹಗಳಲ್ಲಿ ಬದಲಾವಣೆಗಳನ್ನು ತರುತ್ತವೆ. ಹಠಾತ್ತನೆ ‘ಪ್ಯಾನಿಕ್ ಅಟ್ಯಾಕ್’ ಅನ್ನು ತರುತ್ತದೆ. ಒಮ್ಮೆ ಈ ರೀತಿಯ ಅನುಭವವಾದ ತಕ್ಷಣ ವ್ಯಕ್ತಿ ಈ ಅನುಭವವನ್ನು  ಆ ಸನ್ನಿವೇಶದೊಡನೆ ತಳಕು ಹಾಕಿ, ಭಯಕ್ಕೆ ಒಳಗಾಗುತ್ತಾನೆ. ಈ ಭಯ ಹೀಗೆ ಮುಂದುವರಿಯುವುದು ಹತಾಶೆ, ಭಯ, ತಪ್ಪಿತಸ್ಥ ಮನೋಭಾವ ಇವುಗಳನ್ನು ಹೆಚ್ಚಿಸುತ್ತದೆ.

ಅಗೋರಾಫೋಬಿಯಾದ ಪರಿಣಾಮಗಳು
ಖಿನ್ನತೆಯ ಭಾವ
ಮದ್ಯವ್ಯಸನವನ್ನು ಇದಕ್ಕೆ  ‘ಸ್ವ ಚಿಕಿತ್ಸೆ’ ಗಾಗಿ ಉಪಯೋಗಿಸಲಾರಂಭಿಸುವುದು.
*ತನ್ನ ಮೇಲೆ ನಿಯಂತ್ರಣವಿರದ ಭಾವ
*ಇತರ ‘ಭಯ’ಗಳು (ಎತ್ತರದ ಜಾಗ, ಕೀಟಗಳು, ಜನರೊಡನೆ ಮಾತನಾಡುವ ಭಯ ಇತ್ಯಾದಿ)
*ಆತ್ಮವಿಶ್ವಾಸ ಕೆಳಗಿಳಿಯುವುದು, ಕೀಳರಿಮೆ
*ತನ್ನ ಮೇಲೆ ತನಗೇ ಕೋಪ, ಹತಾಶೆ ಗೊಂದಲ
ಅಗೋರಾಫೋಬಿಯಾದಿಂದ ನರಳುವ ವ್ಯಕ್ತಿ ದೈಹಿಕವಾಗಿಯೂ ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬಹುದು.
*ತಲೆ ಸುತ್ತುವಿಕೆ, ದೇಹ ತನ್ನಿಂದ ಬೇರೆಯಾಗಿದೆ, ತನ್ನ ಸುತ್ತಮುತ್ತಲ ವಾತಾವರಣದಿಂದ ತಾನು ದೂರವಾಗುತ್ತಿರುವ ಅನುಭವ
*ಕಿವಿಯಲ್ಲಿ ಗುಂಂiಗುಡುವುದು, ಬಾಯಿ ಒಣಗುವುದು, ಕೈ-ಕಾಲು -ಮುಖ ಜೋಮುಗಟ್ಟುವುದು, ಕಣ್ಣು ಮಂಜಾಗುವುದು.
ಅಜೀರ್ಣ, ಮೈ ಕೈ ನೋವು ಬೆವರುವುದು, ಕೈ ನಡುಗುವುದು,ಹೊಟ್ಟೆ ತೊಳಸುವುದು ‘ಇನ್ನೇನು ಬಿದ್ದುಬಿಡುತ್ತೇನೆ’, ‘ಈಗ ನನಗೆ ಹೃದಯಾಘಾತವಾಗುತ್ತದೆ’ ಎಂಬ ಭಯ.

ಹಾಗಿದ್ದರೆ ಈ ಕಾಯಿಲೆಗೆ ಚಿಕಿತ್ಸೆ ಇಲ್ಲವೆ? ಖಂಡಿತ ಇದೆ. ಅಗೋರಾಫೋಬಿಯಾ ಮೆದುಳಿನ ನರವ್ಯೂಹಗಳಲ್ಲಿನ ಬದಲಾವಣೆಗೆ ಸಂಬಂಧಿಸಿದ್ದು. ಈ ಬದಲಾವಣೆಯನ್ನು ಎರಡು ರೀತಿಗಳಲ್ಲಿ ಸರಿಪಡಿಸಲು ಸಾಧ್ಯವಿದೆ. ಮೊದಲನೆಯದು ನರವಾಹಕಗಳ ಸಮತೋಲನವನ್ನು ಮರಳಿ ತರುವ ಸೆರಟೋನಿನ್ ಹೆಚ್ಚಿಸುವ ಔಷಧಿಗಳು. ಎರಡನೆಯದು ವರ್ತನಾ ಚಿಕಿತ್ಸೆ – Cognitive behaviour therapy ಎನ್ನುವ ಒಂದು ರೀತಿಯ ಮನೋ ಚಿಕಿತ್ಸೆ. ಆದರೆ ಮೊದಲ ಅಡ್ಡಿ ,ರೋಗಿ ಚಿಕಿತ್ಸೆಗೆ ಬರುವುದು!  ಈ ಕಾಯಿಲೆಯಿಂದ ನರಳುವ ರೋಗಿಗಳು ಹೆಚ್ಚಿನ ಸಮಯ ಚಿಕಿತ್ಸೆಗೆ ಬರುವುದು, ಹಲವು ವರುಷಗಳ ನಂತರವೇ. ಆಮೇಲೆ ಬಂದವರಾದರೂ  ಅಷ್ಟೇ. ಚಿಕಿತ್ಸೆಯನ್ನು ಮುಂದುವರಿಸಲು ಹಿಂದೆ-ಮುಂದೆ ನೋಡುವವರೇ. ಕುಟುಂಬದವರಿಗೆ ರೋಗಿಯ ‘ಭಯ’ವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ  ಎನಿಸುತ್ತದೆ. ರೋಗಿಯ  ‘ಭಯ’ ಬೇರೆಯವರಿಗೆ ‘ವಿಚಿತ್ರ’ ಎನಿಸುತ್ತದೆ. “ಇವರೇ ಸ್ವಲ್ಪ ಧೈರ್ಯ ತೆಗೆದುಕೊಂಡರೆ? ಚಿಕಿತ್ಸೆಗೆ ದುಡ್ಡು ಹಾಕುವ ಅವಶ್ಯಕತೆಯೇನು?” ಎಂದೆನಿಸುತ್ತದೆ. ಆದರೆ ‘ನೋವ’ನ್ನು ‘ನೋಡ’ದೆಯೂ ನಾವು ಹೊಟ್ಟೆ ನೋವನ್ನು ನಂಬುವಂತೆ ಅಗೋರಾಫೋಬಿಯಾದ ‘ಭಯ’ವನ್ನು ನಂಬಬೇಕು. ಅದು ನಮ್ಮ ಅನುಭವಕ್ಕೆ ಬಾರದಿದ್ದರೂ, ರೋಗಿಯ ಜೀವನದ ಗುಣಮಟ್ಟಕ್ಕಾಗಿ ಚಿಕಿತ್ಸೆಯನ್ನೂ ಕೊಡಿಸಬೇಕು!.

Write A Comment