ರಾಷ್ಟ್ರೀಯ

ದೆಹಲಿಯಲ್ಲಿ ಕೇಜ್ರಿ ಸರ್ಕಾರಕ್ಕೆ ಉಳಿವು-ಅಳಿವಿನ ಪ್ರಶ್ನೆ

Pinterest LinkedIn Tumblr

Kejriwal-vs-yogendra

ನವದೆಹಲಿ,ಏ.22-ಆಮ್ ಆದ್ಮಿ ಪಕ್ಷದ ನಿಜವಾದ ಸಮರ ಇಲ್ಲಿಂದ ಶುರುವಾಗಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ವಿರೋಧಿಗಳನ್ನೆಲ್ಲ ಪಕ್ಷದಿಂದ ಹೊರ ಹಾಕಿದ್ದೇನೆ ಎಂದೇನೂ ಬೀಗುವಂತಿಲ್ಲ. ಏಕೆಂದರೆ ಮುಂದಿರುವುದೇ ಮಾರಿಹಬ್ಬ. ಅಂಥ ಪರಿಸ್ಥಿತಿಯನ್ನು ಅವರದೇ ಪಕ್ಷದಿಂದ ಉಚ್ಛಾಟನೆಗೊಂಡಿರುವ ಮುಖಂಡರು ಭವಿಷ್ಯದಲ್ಲಿ ಸೃಷ್ಟಿಸಲಿದ್ದಾರೆ.  ಪಕ್ಷದೊಳಗಿನ ಆಂತರಿಕ ಕಚ್ಚಾಟ ನಾಲ್ವರು ಪ್ರಮುಖ ನಾಯಕರ ಉಚ್ಛಾಟನೆಯಿಂದ ಬಗೆಹರಿಯಲಿದೆ ಎಂಬುದು ಕೇಜ್ರಿವಾಲ್ ಇಂಗಿತವಾಗಿರಬಹುದು.

ಆದರೆ ಈ ಕ್ರಮದಿಂದ ಪಕ್ಷದಲ್ಲಿ ಮತ್ತಷ್ಟು ಭಿನ್ನಮತ ಭುಗಿಲೇಳುವ ಸಾಧ್ಯತೆಗಳಿವೆ.  ಅರವಿಂದ್ ಕೇಜ್ರಿವಾಲ್ ಬಣ ಮತ್ತು ಉಚ್ಛಾಟಿತ ನಾಯಕರುಗಳ ಬಣದ ನಡುವೆ ತೀವ್ರ ಸ್ವರೂಪದ ಪೈಪೋಟಿ ಏರ್ಪಟ್ಟಿದ್ದು , ಅದು ಯಾವುದೇ ಕ್ಷಣದಲ್ಲಿ ಸ್ಫೋಟಿಸುವ ಸಾಧ್ಯತೆಗಳಿವೆ. ಹಾಗೇನಾದರೂ ಸಂಭವಿಸಿದಲ್ಲಿ ಮತ್ತೊಮ್ಮೆ ಕೇಜ್ರಿವಾಲ್ ಕುರ್ಚಿ ಅಲುಗಾಡುವುದು ಖಚಿತ.

ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಆನಂದ್‌ಕುಮಾರ್ ಮತ್ತು ಅಜಿತ್ ಝಾ ಅವರನ್ನು ಪಕ್ಷದಿಂದ ಉಚ್ಛಾಟಿಸಿರುವ ಕ್ರಮಕ್ಕೆ ರಾಷ್ಟ್ರೀಯ ಶಿಸ್ತು ಪಾಲನಾ ಸಮಿತಿಯ ಸದಸ್ಯ ಆಸಿಶ್ ಕೇತನ್  ಕೈವಾಡವಿದೆ ಎಂಬುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಈ ನಡುವೆ ಉಚ್ಛಾಟಿತ ನಾಯಕರು ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ  ಒಂದೇ ಸಮನೆ ಮುಗಿಬಿದ್ದಿದ್ದಾರೆ. ಕೇಜ್ರಿವಾಲ್  ಹಿಟ್ಲರ್‌ನಂತೆ ಸರ್ವಾಧಿಕಾರಿಯಾಗಿದ್ದಾರೆ. ಇದು ಹೆಚ್ಚು ದಿನ ನಡೆಯುವುದಿಲ್ಲ. ಇವರ ಬಂಡವಾಳಗಳನ್ನೆಲ್ಲ ಬಯಲು ಮಾಡಿ ಜನತೆಯ ಮುಂದಿಡುತ್ತೇವೆ. ಕೇತನ್ ಅವರು ನಡೆಸಿರುವ ಹಗರಣಗಳ ಬಗ್ಗೆಯೂ ಬಹಿರಂಗಗೊಳಿಸುತ್ತೇವೆ ಎಂದು ಆರೋಪಿಸಿದ್ದಾರೆ.  ಒಟ್ಟಾರೆ ದೆಹಲಿಯ ಜನತೆಯ ಆಶಯಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗಿರುವ ಆಮ್ ಆದ್ಮಿ ಪಕ್ಷದ ಸಂಸ್ಥಾಪಕರ ನಡೆ ಇದೀಗ ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಉಗ್ರ ಸ್ವರೂಪ ಪಡೆಯುವ ಸೂಚನೆಗಳಿವೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರದ ಉಳಿವು- ಅಳಿವಿನ ಪ್ರಶ್ನೆ ಈಗ ಎದುರಾಗಿದೆ.

Write A Comment