ನವದೆಹಲಿ, ಏ.23: ನಿನ್ನೆ ನಡೆದ ಗೆ ಶರಣಾದ ರೈತ ಗಜೇಂದ್ರಸಿಂಗ್ ಯಾರು..? ರೈತನ ಸಾವಿಗೆ ಕಾರಣವೇನು..? ಸಿಂಗ್ ಕೇವಲ ರೈತನಾಗಿದ್ದನೇ..? ಅವನ ಸಾವಿಗೆ ಆಪ್ ಕಾರಣವೇ..? ಮುಂತಾದ ಪ್ರಶ್ನೆಗಳು ಗಜೇಂದ್ರಸಿಂಗ್ ಸಾವಿನ ನಂತರ ಭೂತಾಕಾರ ತಾಳಿ ನಿಂತಿವೆ.
ಇಲ್ಲಿದೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ. ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ರಾಜಸ್ಥಾನದ ದೌಸಾ ಎಂಬ ಊರಿನ ನಿವಾಸಿಯಾಗಿದ್ದ ಗಜೇಂದ್ರಸಿಂಗ್ ಬರೀ ರೈತ ಮಾತ್ರ ಅಲ್ಲ, ಸಕ್ರಿಯ ರಾಜಕಾರಣಿ ಕೂಡ. ಹಾಗೆಯೇ ಸಾಮಾಜಿಕ ಕಾರ್ಯಕರ್ತನೂ ಹೌದು.
41 ವರ್ಷದ ಗಜೇಂದ್ರ ಸಿಂಗ್ ಅವರು ಆರ್ಥಿಕವಾಗಿ ಚೆನ್ನಾಗಿಯೇ ಇದ್ದರು ಮತ್ತು ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಇರಲಿಲ್ಲ ಎನ್ನಲಾಗಿದೆ. ಗಜೇಂದ್ರ ಸಿಂಗ್ ಕುಟುಂಬ ಟೀಕ್ ಪ್ಲಾಂಟೇಷನ್ ಸೇರಿದಂತೆ ಒಟ್ಟು 10 ಎಕರೆ ಜಮೀನು ಹೊಂದಿದ್ದು, ಅವರು ಆರ್ಥಿಕ ಸಂಕಷ್ಟದಲ್ಲಿ ಇರಲಿಲ್ಲ. ಆದರೆ ರಾಜಕೀಯಕ್ಕೆ ಬಂದ ಮೇಲೆ ಗಜೇಂದ್ರ ಸಿಂಗ್ ಅವರು ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದರು ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇನ್ನು ಅಕಾಲಿಕ ಮಳೆಯಿಂದಾಗಿ ಗಜೇಂದ್ರ ಸಿಂಗ್ ಅವರ ಜಮೀನನಲ್ಲಿ ತೀವ್ರತರವಾದ ಬೆಳೆ ಹಾನಿ ಸಂಭವಿಸಿರಲಿಲ್ಲ ಮತ್ತು ಆತ ಆರ್ಥಿಕ ಸಂಕಷ್ಟದಲ್ಲಿರಲಿಲ್ಲ ಎಂದು ಗ್ರಾಮಸ್ಥರು ಹೇಳಿರುವುದಾಗಿ ಟಿವಿ ವಾಹಿನಿ ವರದಿ ಮಾಡಿದೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದ ಈ ಗಜೇಂದ್ರಸಿಂಗ‘. ಬಾಲ್ಯದಲ್ಲಿಯೇ ತನ್ನ ಚಿಕ್ಕಪ್ಪನ ಜತೆ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ಸಿಂಗ್, ಮೂಲತಃ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಕಟ್ಟಾಳು.
ಬಿಜೆಪಿಯ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿಯುವ ಕನಸು ಕಂಡಿದ್ದ ಗಜೇಂದ್ರಸಿಂಗ್‌ಗೆ ಬಿಜೆಪಿ ನಿರಾಸೆ ಉಂಟುಮಾಡಿದಾಗ 2003ರಲ್ಲಿ ನೇರವಾಗಿ ಎಸ್‌ಪಿಗೆ ಪಾದಾರ್ಪಣೆ. ಎಸ್‌ಪಿಯಿಂದ ಚುನಾವಣೆಗೂ ಸ್ಪರ್ಧಿಸಿದ ಸಿಂಗ್ ಬಿಜೆಪಿಯ ಅಲ್ಕಾಸಿಂಗ್ ಎದುರು ಸೋತಿದ್ದ. ಚುನಾವಣೆಯಲ್ಲಿ ಸೋತರೂ ಪಕ್ಷದಲ್ಲೇ ಮುಂದುವರಿದ. ಜಿಲ್ಲಾ ಎಸ್‌ಪಿ ಅಧ್ಯಕ್ಷನಾದ ಗಜೇಂದ್ರಸಿಂಗ್ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯನೂ ಆಗಿದ್ದ. 2013ರಲ್ಲಿ ವಿಧಾನಸಭೆ ಪ್ರವೇಶಿಸಲೇಬೇಕೆಂಬ ಹಠಕ್ಕೆ ಬಿದ್ದ ಸಿಂಗ್ ಕಾಂಗ್ರೆಸ್ ಸೇರಿದರು. ಅಲ್ಲಿ ಸೂಕ್ತ ಅವಕಾಶಗಳು ಸಿಕ್ಕದಿದ್ದಾಗ ಆಮ್ ಆದ್ಮಿ ಪಾರ್ಟಿ (ಎಎಪಿ) ಸೇರಿಕೊಂಡರು.
ಸಮಸ್ಯೆಗಳ ಸುಳಿ:
ಮೇಲಿನದೆಲ್ಲ ಒಂದು ಮುಖವಾದರೆ, ಇನ್ನೊಂದು ಮುಖದಲ್ಲಿ ಗಜೇಂದ್ರಸಿಂಗ್ ಕೌಟುಂಬಿಕ ಸಮಸ್ಯೆಯಲ್ಲಿ ಸಿಲುಕಿದ್ದ. ಕುಟುಂಬ ಸದಸ್ಯರೆಲ್ಲ ಇವನನ್ನು ಮನೆಬಿಟ್ಟು ಹೊರಟು ಹೋಗುವಂತೆ ಹೇಳಿದ್ದರು. ಗಜೇಂದ್ರಸಿಂಗ್‌ನ ತಂದೆ ಇವನನ್ನು ತನ್ನ ವಾರಸುದಾರ ಎಂದು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಹಾಗಾಗಿ ಬಹುತೇಕ ಸಿಂಗ್‌ನನ್ನು ಮನೆಯಿಂದ ಹೊರಗೆ ಹಾಕಿದ್ದರು ಎಂಬ ಸುದ್ದಿಯೂ ಇತ್ತು. ಇದನ್ನೆಲ್ಲ ಗಜೇಂದ್ರ ತನ್ನ ಡೆತ್‌ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾನೆ ಎಂಬ ಮಾತುಗಳೂ ಕೇಳಿಬಂದಿವೆ. ಇತ್ತೀಚೆಗಷ್ಟೆ ಅವರ ಮನೆಯಲ್ಲೊಂದು ವಿವಾಹ ಕಾರ್ಯ ನಡೆದಿತ್ತು. ಆದರೆ, ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಈ ನತದೃಷ್ಟ ಗಜೇಂದ್ರನಿಗೆ ದೊರೆಯಲಿಲ್ಲ. ಅದು ಅವನಿಗೆ ತುಂಬಾ ಬೇಸರ ತರಿಸಿತ್ತು.
ಪೇಟ ಕಟ್ಟುತ್ತಿದ್ದ:
ಗಜೇಂದ್ರಸಿಂಗ್‌ಗೆ ಪೇಟ ಕಟ್ಟುವ ವಿದ್ಯೆ ಕರಗತವಾಗಿತ್ತು. ಪೇಟ ಕಟ್ಟುವುದರಲ್ಲಿ ಸಿದ್ಧಹಸ್ತನಾಗಿದ್ದ. ದೇಶ-ವಿದೇಶಗಳ ಅನೇಕ ಗಣ್ಯರಿಗೆ ಪೇಟ ಕಟ್ಟಿ ಹೆಸರು ಸಂಪಾದಿಸಿದ್ದ. ಪೇಟಕ್ಕಾಗಿ ಗಜೇಂದ್ರಸಿಂಗ್ ಎದುರು ತಲೆಬಾಗಿದ ಪ್ರಮುಖರಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ನೇಪಾಳ ಅಧ್ಯಕ್ಷ ರಪಮಾನಂದ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಷಿ ಸೇರಿದಂತೆ ಅನೇಕರು ಆಗಿಹೋಗಿದ್ದಾರೆ. ಇಷ್ಟೆಲ್ಲ ಹಿನ್ನೆಲೆಯ ಗಜೇಂದ್ರಸಿಂಗ್ ಈಗ ಇಲ್ಲ. ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.