ನವದೆಹಲಿ, ಏ.26: ಉತ್ತರ ಭಾರತದ ಅನೇಕ ರಾಷ್ಟ್ರಗಳಲ್ಲಿ ನಿನ್ನೆಯಿಂದ ಸಂಭವಿಸಿದ ಭೂಕಂಪಕ್ಕೆ 75ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಭೂಕಂಪನಕ್ಕೆ ಸಿಕ್ಕಿ ಸಾವನ್ನಪ್ಪಿರುವ ಕುಟುಂಬಕ್ಕೆ ಕೇಂದ್ರ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಗಾಯಾಳುಗಳಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಪರಿಹಾರ ಕಾರ್ಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರಮೋದಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.
ಬಿಹಾರ ರಾಜ್ಯವೊಂದರಲ್ಲೇ 47 ಮಂದಿ ಸಾವನ್ನಪ್ಪಿದ್ದರೆ, ಉತ್ತರ ಪ್ರದೇಶದಲ್ಲಿ 10, ಪಶ್ಚಿಮ ಬಂಗಾಳದಲ್ಲಿ ಮೂರು ಸೇರಿದಂತೆ 75ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಗೃಹ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 250ಕ್ಕೂ ಹೆಚ್ಚು ಮಂದಿ ಭೂಕಂಪನದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಿದೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಸಚಿವ ಕಿರಣ್ ರಿಜೂಜ್ ತಿಳಿಸಿದ್ದಾರೆ.
ನೇಪಾಳದಲ್ಲಿ ಉಂಟಾದ ಭೂಕಂಪದಿಂದ ಉತ್ತರ ಭಾರತದ ಅನೇಕ ಕಡೆ ಭೂಕಂಪ ಸಂಭವಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಪರಿಸ್ಥಿತಿಯನ್ನು ಕ್ಷಣಕ್ಷಣಕ್ಕೂ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆಯುತ್ತಿದ್ದಾರೆಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ದೆಹಲಿ, ಅಸ್ಸೋಂ, ಮಣಿಪುರ, ಸಿಕ್ಕಿಂ ಮತ್ತಿತರ ಕಡೆ ಲಘು ಪ್ರಮಾಣದ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ನೇಪಾಳದಲ್ಲಿ ಉಂಟಾದ ಪರಿಸ್ಥಿತಿಯಿಂದ ನಮ್ಮಲ್ಲೂ ಕೂಡ ಭೂಕಂಪ ಉಂಟಾಗಿದೆ. ಈಗಾಗಲೇ ಸಹಾಯವಾಣಿ ತೆರೆಯಲಾಗಿದ್ದು, ರಾಜ್ಯಸರ್ಕಾರಗಳ ಜತೆ ನಾವು ಸತತ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು. ಭಾನುವಾರ ಬೆಳಗ್ಗೆ ಬಂದಿರುವ ಮಾಹಿತಿಯಂತೆ ಭಾರತದಲ್ಲಿ ಒಟ್ಟು 75 ಮಂದಿ ಸಾವನ್ನಪ್ಪಿದ್ದಾರೆ. ತಕ್ಷಣವೇ ತುರ್ತು ಕಾರ್ಯಾಚರಣೆ ಕೈಗೊಳ್ಳಲು ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿಕೊಡಲಾಗಿದೆ.
ಖುದ್ದು ಪ್ರಧಾನಿಯವರೇ ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಬಿಹಾರದ ನಿತಿಶ್ ಕುಮಾರ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಸಿಕ್ಕಿಂನ ಪವನ್‌ಕುಮಾರ್ ಚಾಮ್ಲಿ, ಮಧ್ಯ ಪ್ರದೇಶದ ಶಿವರಾಜ್‌ಸಿಂಗ್ ಚೌಹಾಣ್ ಸೇರಿದಂತೆ ಮತ್ತಿತರ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ಕೇಂದ್ರದಿಂದ ಎಲ್ಲ ರೀತಿಯ ಅಗತ್ಯ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ. ಕೇಂದ್ರವು ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ. ಸಾರ್ವಜನಿಕರು ಭಯಭೀತರಾಗದಂತೆ ಸ್ಥಳೀಯ ಸರ್ಕಾರಗಳು ಮುಂದೆ ಬರಬೇಕು. ಸಾರ್ವಜನಿಕರಲ್ಲಿ ಉಂಟಾಗಿರುವ ಭೀತಿಯನ್ನು ಹೋಗಲಾಡಿಸಲು ಮುಂದಾಗುವಂತೆ ಸೂಚನೆ ಕೊಟ್ಟಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್, ಅರೆಸೇನಾ ಪಡೆ, ಸೇನಾಪಡೆ, ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಭಾರತೀಯ ವಾಯುಪಡೆಗೆ ಸೇರಿದ ವಿಮಾನಗಳು, ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
ಪಾಟ್ನಾ, ಸುಪಾಲ್, ಮುಜಾಫರ್‌ಪುರ್, ದರ್ಬಂಗ, ಗೋಪಾಲ್‌ಗಂಜ್, ಗೋರಖ್‌ಪುರ್ ಮತ್ತಿತರ ಕಡೆ ಪ್ರತ್ಯೇಕ ತಂಡಗಳನ್ನು ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿದೆ. ನೇಪಾಳಕ್ಕೆ 460 ಮಂದಿ ಎನ್‌ಡಿಆರ್‌ಎಫ್ ತಂಡ ಕಳುಹಿಸಿಕೊಡಲಾಗಿದೆ. ಉಳಿದಂತೆ ಇತರೆ ರಾಜ್ಯಗಳಿಗೆ ಅಗತ್ಯಕ್ಕನುಗುಣವಾಗಿ ಪರಿಹಾರಕ್ಕೆ ರಕ್ಷಣಾ ತಂಡ ತೆರಳಿದೆ. ತುರ್ತು ನಿರ್ವಹಣಾ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಇದಕ್ಕೆ ಕೇಂದ್ರ ಸಂಪುಟದ ಕಾರ್ಯದರ್ಶಿ ಅಜಿತ್‌ಸೇಠ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯಲು ಸೂಚನೆ ಕೊಡಲಾಗಿದೆ. ಪರಿಸ್ಥಿತಿಯನ್ನು ಪ್ರಧಾನಿಯವರು ಅವಲೋಕನ ಮಾಡುತ್ತಿದ್ದಾರೆ ಎಂದು ರಿಜಿಜ್ ತಿಳಿಸಿದ್ದಾರೆ.