ನವದೆಹಲಿ: ತಮ್ಮ ಪಕ್ಷದ ಕಾರ್ಯಕರ್ತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು ಮಂಗಳವಾರ ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿಲ್ಲ.
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದಲ್ಲೇ ಬಿರುಕು ಉಂಟಾಗಿದ್ದು, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಬರ್ಖಾ ಶುಕ್ಲಾ ಸಿಂಗ್ ಅವರು ಸುದ್ದಿಗೋಷ್ಠಿಯನ್ನು ಮುಗಿಸಿ ಹೊರಡಬೇಕು ಎನ್ನುವಾಗ, ಪಕ್ಕದಲ್ಲೇ ಕುಳಿತಿದ್ದ ಆಯೋಗದ ಮತ್ತೊಬ್ಬ ಸದಸ್ಯೆ ಇದೊಂದು ಕುಮಾರ್ ವಿಶ್ವಾಸ್ ವಿರುದ್ಧದ ರಾಜಕೀಯ ಪಿತೂರಿ ಪ್ರಕರಣ ಎಂದರು.
ತಕ್ಷಣವೇ ಎಚ್ಚೆತ್ತುಕೊಂಡ ಆಯೋಗದ ಮುಖ್ಯಸ್ಥೆ, ಈ ಕುರಿತು ಹೇಳಿಕೆ ನೀಡದಂತೆ ಸದಸ್ಯೆ ಜುಹಿ ಖಾನ್ ಅವರನ್ನು ತಡೆದರು. ಅಲ್ಲದೆ ಆಮ್ ಆದ್ಮಿ ಪಕ್ಷವೇ ಸುದ್ದಿಗೋಷ್ಠಿಗೆ ಅಡ್ಡಿಪಡಿಸುವಂತೆ ಖಾನ್ ಅವರನ್ನು ಇಲ್ಲಿಗೆ ಕಳುಹಿಸಿದೆ ಎಂದು ಆರೋಪಿಸಿದರು. ಬಳಿಕ ಖಾನ್ ದೆಹಲಿ ಮಹಿಳಾ ಆಯೋಗದ ಸದಸ್ಯೆ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಹೇಳಿದರು.
ಈ ನಾಟಕೀಯ ಬೆಳವಣಿಗೆಗೂ ಮುನ್ನ, ತನಗೆ ದೆಹಲಿ ಮಹಿಳಾ ಆಯೋಗದ ನೋಟಿಸ್ ತಲುಪಿಲ್ಲ ಎಂಬ ಕುಮಾರ್ ವಿಶ್ವಾಸ್ ಹೇಳಿಕೆಯನ್ನು ತಳ್ಳಿಹಾಕಿದ ಸಿಂಗ್, ಆಪ್ ನಾಯಕ ಸುಳ್ಳು ಹೇಳುತ್ತಿದ್ದಾರೆ. ಶನಿವಾರವೇ ಅವರ ವಸುಂಧರ ನಿವಾಸಕ್ಕೆ ನೋಟಿಸ್ ತಲುಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಈ ಸಂಬಂಧ ಕುಮಾರ್ ವಿಶ್ವಾಸ್ ಅವರಿಗೆ ಮಹಿಳಾ ಆಯೋಗ ಮತ್ತೊಂದು ನೋಟಿಸ್ ಜಾರಿ ಮಾಡಿದ್ದು, ನಾಳೆ ಮಧ್ಯಾಹ್ನ 12 ಗಂಟೆಯೊಳಗೆ ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಸಿಂಗ್ ತಿಳಿಸಿದರು.