ನವದೆಹಲಿ: ಸರ್ಕಾರಿ ಇಂಜಿನಿಯರ್ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕ ಜರ್ನೈಲ್ ಸಿಂಗ್ ಅವರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ.
ಎಎಪಿ ಶಾಸಕ ಜರ್ನೈಲ್ ಸಿಂಗ್ ಅವರು ತಲೆಮರೆಸಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು ಮಂಗಳವಾರ ಹೇಳಿದ್ದಾರೆ. ಪ್ರಕರಣ ಸಂಬಂಧ ಕಳೆದ ಶನಿವಾರ ಸಿಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ.
ಪಶ್ಚಿಮ ದೆಹಲಿಯ ತಿಲಕ್ ನಗರದಿಂದ ಶಾಸಕರಾಗಿ ಆಯ್ಕೆಯಾಗಿರುವ 42 ವರ್ಷದ ಜರ್ನೈಲ್ ಸಿಂಗ್ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಂಡಿದ್ದ ಸಂದರ್ಭದಲ್ಲಿ ಎಂಜಿನಿಯರ್ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಿಗ್ಗಾಮುಗ್ಗಾ ಥಳಿಸಿರುವುದಾಗಿ ದೂರು ನೀಡಲಾಗಿತ್ತು.
ಜರ್ನೈಲ್ ಸಿಂಗ್ ವಿರುದ್ಧ ಕೇಸ್ ದಾಖಲಿಸಿರುವ ಇಂಜಿನಿಯರ್ ಅಝಹರ್ ಮುಸ್ತಾಫಾ, ಶಾಸಕರು ತನ್ನ ವಿರುದ್ಧ ಸುಳ್ಳು ಭ್ರಷ್ಟಾಚಾರದ ಕೇಸು ದಾಖಲಿಸಿ ಮನೆಗೆ ಕಳುಹಿಸುವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.