ಹೈದರಾಬಾದ್: ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಗೆ ಇತ್ತೀಚೆಗಷ್ಟೇ ಸೇರಿದ್ದ ಹೈದರಬಾದ್ ಮೂಲದ ಯುವಕ ಸಿರಿಯಾದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸಿರಿಯಾದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಹೈದರಾಬಾದ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಹನೀಫ್ ವಾಸೀಂ(25ವರ್ಷ) ಸಾವನ್ನಪ್ಪಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ. ಹನೀಫ್ ವಾಸೀಂ 2014ರ ನವೆಂಬರ್ ನಲ್ಲಿ ಇಂಜಿನಿಯರಿಂಗ್ ಕಲಿಯಲು ಲಂಡನ್ ಗೆ ತೆರಳಿದ್ದ. ಬಳಿಕ ವಾಸೀಂ ಲಂಡನ್ ನಿಂದ ಸಿರಿಯಾಕ್ಕೆ ತೆರಳಿ ಐಸಿಸ್ ಸಂಘಟನೆ ಸೇರಿದ್ದ ಎಂದು ಹೇಳಲಾಗುತ್ತಿದೆ. ವಾಸೀಂ ಮಾರ್ಚ್ 15ರಂದು ಸಾವನ್ನಪ್ಪಿರುವುದಾಗಿ ಖಾಸಗಿ ಸುದ್ದಿವಾಹಿನಿಯೊಂದು ವರದಿ ಬಿತ್ತರಿಸಿದೆ.
ವಾಸೀಂ ಲಂಡನ್ ನಲ್ಲಿ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ವಾಸೀಂ ಐಸಿಸ್ ಉಗ್ರರ ಪ್ರಭಾವಕ್ಕೆ ಒಳಗಾಗಿದ್ದ. ಕಳೆದ ಫೆಬ್ರುವರಿ ತಿಂಗಳಿನಲ್ಲಿ ಈತ ತನ್ನ ಸಹೋದರಿ ಮದುವೆಗಾಗಿ ಹೈದರಾಬಾದ್ ನ ಆದಿಲಾಬಾದ್ ಜಿಲ್ಲೆಯ ಮಂಚೇರಿಯಲ್ ನಲ್ಲಿರುವ ಮನೆಗೆ ಭೇಟಿ ನೀಡಿದ್ದ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ವಾಸೀಂ ವಾಪಸ್ ತೆರಳುವಾಗ ಕರೀಂನಗರದಿಂದ ಮತ್ತೊಬ್ಬ ಯುವಕನನ್ನು ಕರೆದೊಯ್ದಿರುವುದಾಗಿ ಪೊಲೀಸರು ಶಂಕಿಸಿದ್ದು, ಈ ಬಗ್ಗೆ ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹನೀಫ್ ವಾಸೀಂ ಹೇಗೆ ಸತ್ತಿದ್ದಾನೆ ಎಂದು ಖಚಿತವಾಗಿ ತಿಳಿದುಬಂದಿಲ್ಲ. ಆದರೆ ಸಿರಿಯಾದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ ನೆಲಬಾಂಬ್ ಅಥವಾ ಎದುರಾಳಿ ಪಡೆಯ ಗುಂಡಿಗೆ ವಾಸೀಂ ಬಲಿಯಾಗಿರಬಹುದು ಗುಪ್ತಚರ ಮೂಲಗಳು ಹೇಳಿವೆ. ಇನ್ನು ಹನೀಫ್ ವಾಸೀಂ ಅವರ ಸಾವಿನ ವಿಚಾರವನ್ನು ಅವರ ಪೋಷಕರಿಗೆ ಉರ್ದು ಭಾಷೆಯಲ್ಲಿ ಎಸ್ ಎಂಎಸ್ ಮೂಲಕ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಉಗ್ರ ಸಂಘಟನೆ ಇಸಿಸ್ ಮೋಹಕ್ಕೆ ಒಳಗಾಗಿ ಸಾವಿರಾರು ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ.