ರಾಷ್ಟ್ರೀಯ

ಮೂತ್ರ ಉಣಿಸಿ ತೋಟ ಕಟ್ಟಿದ ಗಡ್ಕರಿ!

Pinterest LinkedIn Tumblr

Nitin-Gadkari

ಮುಂಬಯಿ: ಗೋಮೂತ್ರ ಪವಿತ್ರ ಎಂದು ಬಿಜೆಪಿ ಮಂದಿ ಪದೇಪದೆ ಹೇಳುತ್ತಿರುತ್ತಾರೆ. ಇದೇ ಪಕ್ಷದವರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ, ”ನನ್ನ ಮೂತ್ರ ಮೀರಿಸುವ ರಸಗೊಬ್ಬರ ಇನ್ನೊಂದಿಲ್ಲ ನೋಡಿ,” ಎಂದಿದ್ದಾರೆ!

ಹೌದು, ಗಡ್ಕರಿ ಅವರು ತಮ್ಮ ದಿಲ್ಲಿ ಬಂಗಲೆಯ ಹಿಂದಿನ ಹಿತ್ತಲಿನಲ್ಲಿ ಮರ ಗಿಡಗಳು ನಳನಳಿಸುತ್ತಿರಲು ತಮ್ಮ ಮೂತ್ರವೇ ಕಾರಣ ಎಂಬ ರಹಸ್ಯವನ್ನು ಬಹಿರಂಗ ಮಾಡಿದ್ದಾರೆ.

ಕಳೆದ ಭಾನುವಾರ ತಮ್ಮ ತವರು ಮಹಾರಾಷ್ಟ್ರದ ನಾಗ್ಪುರದಲ್ಲಿ ತುಂತುರು ಹನಿ ನೀರಾವರಿ ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಮಾತನಾಡಿ ಮೂತ್ರ ಸಿಂಪಡಣೆಯ ಪ್ರಭಾವವನ್ನು ಕೊಂಡಾಡಿದರು. ”ಪುಕ್ಕಟೆಯಾಗಿ ದೊರೆಯುವ ಹೋಮ್‌ಮೇಡ್ ಫರ್ಟಿಲೈಸರ್ ಎಂದರೆ ಅದು ಮೂತ್ರ. ಇದನ್ನು ಗಿಡಗಳಿಗೆ ಉಣಿಸಿದರೆ ಅವು ‘ಬರ‌್ರನೆ’ ಬೆಳೆದು ದೊಡ್ಡದಾಗುತ್ತವೆ. ಏಕೆಂದರೆ ಮೂತ್ರದಲ್ಲಿ ಯೂರಿಯಾ ಹಾಗೂ ನೈಟ್ರೋಜನ್ ಇರುತ್ತದೆ,” ಎಂದು ಗಡ್ಕರಿ ಹೇಳಿದರು.

”ನನ್ನ ದಿಲ್ಲಿ ಮನೆಯಲ್ಲಿ 50 ಲೀಟರ್ ಕ್ಯಾನ್ ತಂದಿಟ್ಟುಕೊಂಡಿದ್ದೇನೆ. ಪ್ರತಿದಿನವೂ ನಾನು ಆ ಕ್ಯಾನ್‌ನಲ್ಲೇ ಮೂತ್ರ ಮಾಡುತ್ತೇನೆ. ಇದನ್ನು ಬಂಗಲೆಯ ಹಿತ್ತಲಿನಲ್ಲಿರುವ ಗಿಡಗಳಿಗೆ ಉಣಿಸುವಂತೆ ನನ್ನ ತೋಟದ ಮಾಲಿಗೆ ಸೂಚಿಸಿದ್ದೇನೆ. ಬರೀ ನೀರುಣಿಸಿದ ಸಸಿಗಳಿಗಿಂತ ಮೂತ್ರ ಹೀರಿದ ಗಿಡಗಳು ಒಂದೂವರೆ ಪಟ್ಟು ಹೆಚ್ಚು ದೊಡ್ಡದಾಗಿ, ಬೇಗಬೇಗನೆ ಬೆಳೆದಿವೆ,” ಎಂದು ಗಡ್ಕರಿ ತಮ್ಮ ಅನುಭವ ವಿವರಿಸಿದರು.

”ಹಾಂ! ಕ್ಯಾನ್‌ನೊಳಗೆ ಬರೀ ಮೂತ್ರ ಮಾತ್ರ ಉಯ್ಯಿರಿ ಮತ್ತೆ!,” ಎಂದು ಅವರು ಹೇಳಿದಾಗಂತೂ ಸಭೆ ನಗೆಗಡಲಿನಲ್ಲಿ ಮುಳುಗಿತು.

ಗಡ್ಕರಿ ಬಂಗಲೆಯ ಹಿತ್ತಲಿನಲ್ಲಿ ಒಂದು ಎಕರೆಗೂ ಹೆಚ್ಚಿನ ವಿಸ್ತಾರದ ತೋಟವಿದೆ. ಅಲ್ಲಿ ಅವರು ಹಣ್ಣು, ಹೂ, ತರಕಾರಿ ಬೆಳೆಯುವ ಜತೆ ಹತ್ತಾರು ವಿಧದ ಮರಗಳನ್ನೂ ಬೆಳೆಸಿದ್ದಾರೆ. ”ಒಂದು ಕಿತ್ತಳೆ ಗಿಡ ಹಾಗೂ ಒಂದು ಮಲ್ಲಿಗೆ ಹೂವಿನ ಬಳ್ಳಿಗೆ ಬರೀ ಮೂತ್ರವನ್ನೇ ಉಣಿಸಿ ಪರೀಕ್ಷೆ ಮಾಡಿದ್ದೇನೆ. ಬೇರೆ ಗಿಡಗಳಿಗೆ ಹೋಲಿಸಿದರೆ ಮೂತ್ರ ಕುಡಿದ ಗಿಡಮರಗಳು ಹೆಚ್ಚು ಹೂವು, ಹಣ್ಣು ಕೊಟ್ಟಿವೆ,” ಎಂದು ಗಡ್ಕರಿ ಷರಾ ಬರೆದರು.

Write A Comment