ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಹೊರಬೀಳುತ್ತಿದ್ದಂತೆಯೇ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಅಮ್ಮನಿಗೆ ಮರಳಿ ಪಟ್ಟ ಕಟ್ಟಲು ಸರ್ವ ಸಿದ್ದತೆಗಳು ಚುರುಕಿನಿಂದ ನಡೆದಿವೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಜಯಲಲಿತಾ ಅವರನ್ನು ದೋಷಿ ಎಂದು ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಜಯಲಲಿತ ಅವರನ್ನು ನಿರ್ದೋಷಿಗಳು ಎಂದು ಹೇಳುತ್ತಿದ್ದಂತೆಯೇ ಜಯಾ ಅವರ ನೆಚ್ಚಿನ ಭಂಟ ಮುಖ್ಯಮಂತ್ರಿ ಒ.ಪನೀರ್ ಸೆಲ್ವಂ ಅವರು ತಮ್ಮ ಅಧಿನಾಯಕಿಯ ನಿವಾಸಕ್ಕೆ ತೆರಳಿ ಈ ಬಗ್ಗೆ ತುರ್ತು ಸಮಾಲೋಚನೆ ನಡೆಸಿದರು.
ಜಯಲಲಿತಾ ಅವರು ತಮ್ಮ ಇತರ ಮೂವರು ಸಂಘಟಿತರೊಂದಿಗೆ ಆರೋಪಿ ಎಂದು ಸಾಬೀತಾದಾಗ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವುದು ಅನಿವಾರ್ಯವಾಗಿತ್ತು. ಈ ಸಂದರ್ಭ ಜಯಲಲಿತಾ ಅವರು, ತಮ್ಮ ಆಪ್ತ ಮತ್ತು ನೆಚ್ಚಿನ ಭಂಟ ಪನೀರ್ ಸೆಲ್ವಂ ಅವರನ್ನು ಗದ್ದುಗೆ ಮೇಲೆ ಕೂರಿಸಿದ್ದರು. ಯಾವತ್ತೂ ಜಯಲಲಿತಾ ಅವರಿಗೆ ನಿಷ್ಠರಾಗಿರುವ ಪನೀರ್ ಸೆಲ್ವಂ ತಮ್ಮ ಅಮ್ಮ ದೋಷಮುಕ್ತ ರಾಗುತ್ತಿದ್ದಂತೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದರು. ಪ್ರಸ್ತುತ ತಮಿಳುನಾಡಿನಲ್ಲಿ ಈ ತೀರ್ಪು ಭಾರೀ ಸಂಚಲನವುಂಟು ಮಾಡಿದೆ.
ರಾಜ್ಯದಲ್ಲಿ ಮತ್ತೊಂದು ಅಧಿಕಾರದ ಪರ್ವ ಕಾಲಕ್ಕೆ ವೇದಿಕೆ ಸಜ್ಜಾಗಿದೆ. ಇನ್ನು ಅಮ್ಮ ಮುಖ್ಯಮಂತ್ರಿ ಪಟ್ಟ ಏರಲು ಮುಹೂರ್ತ ಫಿಕ್ಸ್ ಮಾಡುವುದೊಂದೇ ಬಾಕಿ. ಒಂದು ಮೂಲದ ಪ್ರಕಾರ ಮುಖ್ಯಮಂತ್ರಿ ಪನೀರ್ ಸೆಲ್ವಂ ಇಂದು ಸಂಜೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿದ್ದು, ನಾಳೆ ಅಥವಾ ನಾಡಿದ್ದರಲ್ಲಿ ಜಯಲಲಿತಾ ಅವರು 4ನೇ ಬಾರಿ ಮುಖ್ಯಮಂತ್ರಿಯಾಗಲು ಸಿದ್ಧತೆ ನಡೆಸಿದ್ದಾರೆ.