ಗೋರಖ್‌ಪುರ್: ಯೋಗ ಅಭ್ಯಾಸ ಮಾಡುತ್ತಿರುವಾಗ ಅಡ್ಡಿಪಡಿಸಿದ್ದಾನೆ ಎನ್ನುವ ಕಾರಣಕ್ಕೆ ಐಎಎಸ್ ಅಧಿಕಾರಿಯೊಬ್ಬ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗಾರ್ಡನ್ ಮಾಲಿಯೊಬ್ಬನಿಗೆ ಜೈಲಿಗೆ ಕಳುಹಿಸಿದ ಘಟನೆ ವರದಿಯಾಗಿದೆ.
ಯೋಗ ಮಾಡುತ್ತಿರುವಾಗ ಗಾರ್ಡನ್ ಮಾಲಿ ವಿಶ್ವನಾಥ್ ಯಾದವ್ ಅಡ್ಡಿಪಡಿಸಿ ಶಾಂತಿಗೆ ಭಂಗ ತಂದಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧ ಐಎಎಸ್ ಮಹಿಳಾ ಅಧಿಕಾರಿ ನೇಹಾ ಪ್ರಕಾಶ್ 151 ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿ ಮಾಲಿಯನ್ನು ಜೈಲಿಗೆ ಅಟ್ಟಿದ್ದರು. ಆದರೆ, ಜಿಲ್ಲಾ ನ್ಯಾಯಾಧೀಶರ ಮಧ್ಯಸ್ಥಿಕೆಯಿಂದಾಗಿ ಕೊನೆಗೂ ಮಾಲಿಯನ್ನು ಬಿಡುಗಡೆಗೊಳಿಸಲಾಯಿತು.
ಪಂಡಿತ್ ವಲ್ಲಭ್ ಪಂತ್ ಪಾರ್ಕ್‌ನಲ್ಲಿ ಐಎಎಸ್ ಅಧಿಕಾರಿ ನೇಹಾ ಪ್ರಕಾಶ ಯೋಗ ಅಭ್ಯಾಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಗಾರ್ಡನ್‌ನಲ್ಲಿ ಮಾಲಿಯೊಬ್ಬ ಯಂತ್ರದಿಂದ ಗಿಡಗಳನ್ನು ಕತ್ತರಿಸುತ್ತಿದ್ದನು. ಶಬ್ದದಿಂದ ಶಾಂತಿ ಭಂಗವಾಗುತ್ತಿದೆ ಎಂದು ನೇಹಾ ಮಾಲಿಗೆ ಹೇಳಿದ್ದಾರೆ. ಕೆಲ ಕಾಲ ಸುಮ್ಮನಿದ್ದ ಮಾಲಿ ಮತ್ತೆ ಯಂತ್ರದಿಂದ ಗಿಡವನ್ನು ಆರಂಭಿಸಿದ್ದಾನೆ. ಇದರಿಂದ ಕೋಪಗೊಂಡ ನೇಹಾ ಪ್ರಕಾಶ್
ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿದ ನಂತರ ಪೊಲೀಸರು ಮಾಲಿ ವಿಶ್ವನಾಥನನ್ನು ಬಂಧಿಸಿದ್ದರು.
ಪಾಟ್ನಾದ ಐಐಎಂ ಪದವೀಧರರು 2012ರ ಬ್ಯಾಚ್ ಅಧಿಕಾರಿಯಾದ ನೇಹಾ ಪ್ರಕಾಶ್ ಲಕ್ನೋದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿ ವೈಭವ್ ಶ್ರೀವಾಸ್ತವ್ ಕೂಡಾ ಐಎಎಸ್ ಅಧಿಕಾರಿಯಾಗಿದ್ದು ಉತ್ತರಪ್ರದೇಶದ ಮೌವ್ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.