ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರದ ಸಾಧನೆ ಶೂನ್ಯ ಎಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಈ ಅವಧಿಯಲ್ಲಿ ಮೋದಿ ಒಬ್ಬ ಮಾರ್ಕೆಟಿಂಗ್ ಗುರುವಾಗಿ ಹೊರಹೊಮ್ಮಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ವರ್ಷದಲ್ಲಿ ಏನನ್ನೂ ಮಾಡಿಲ್ಲ. ಯುಪಿಎ ಸರ್ಕಾರದ ಯೋಜನೆಗಳನ್ನು ಹೊಸದಾಗಿ ಪ್ಯಾಕ್ ಮಾಡಿ ಅದನ್ನು ಎನ್ಡಿಎ ಸರ್ಕಾರದ ಯೋಜನೆಗಳು ಎಂಬಂತೆ ಬಿಂಬಿಸುತ್ತಿರುವ ಮೋದಿ ಒಬ್ಬ ಮಾರ್ಕೆಟಿಂಗ್ ಗುರುವಷ್ಟೇ. ಹಾಗಾಗಿ ಶೂನ್ಯ ಸಾಧನೆಯನ್ನೂ ಸಹ ಪರಿಣಾಮಕಾರಿಯಾಗಿ ಬಿಂಬಿಸಿಕೊಳ್ಳುವಲ್ಲಿ ಪರಿಣತಿ ಹೊಂದಿರುವ ಮೋದಿ ಒಂದು ವರ್ಷದ ಆಡಳಿತವನ್ನು ಸಾಧನೆ ಎಂಬಂತೆ ವೈಭವೀಕರಿಸುತ್ತಿದ್ದು ಇದು ಕೇವಲ ಪೊಳ್ಳು ಎಂಬುದು ಜನರಿಗೂ ತಿಳಿದಿದೆ ಎಂದರು.
ಕಳೆದ ವರ್ಷದ ಲೋಕಸಭಾ ಚುನಾವಣಾ ಪ್ರಚಾರ ವೇಳೆ ಮಾಂಸದ ರಫ್ತು ವಿರುದ್ಧ ಮೋದಿ ಸಮರ ಸಾರಿದ್ದರು. ಆದರೆ ಅವರ ಸರ್ಕಾರ ಬಂದ ಮೇಲೆ ದೇಶದಲ್ಲಿ ಮಾಂಸದ ರಫ್ತು ಪ್ರಮಾಣ ಶೇ. 15ರಷ್ಟು ಹೆಚ್ಚಾಗಿದ್ದು ಇದರಲ್ಲಿ ಮಾತ್ರ ಪ್ರಗತಿಯಾಗಿದೆ ಎಂದು ತಿಳಿಸಿದರು.