ಭಿಕ್ಷೆ ನೀಡದಿದ್ದುದಕ್ಕೆ ವ್ಯಕ್ತಿಯೊಬ್ಬನನ್ನು ಇಬ್ಬರು ಬಾಲಕರು ಸೇರಿ ಹತ್ಯೆ ಮಾಡಿದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಕೃತ್ಯ ನಡೆದಿದ್ದು ಇಲ್ಲಿನ ಕಾಲಕಾಜಿ ಮಂದಿರದ ಬಳಿ ಹೂವಿನ ಅಂಗಡಿ ಇಟ್ಟುಕೊಂಡಿದ್ದ ಸಂಜಯ್, ಪಕ್ಕದ ಅಂಗಡಿಯ ಬಳಿ ಮದ್ಯ ಕುಡಿಯುತ್ತಿದ್ದ. ಆ ಸಮಯದಲ್ಲಿ ಅಲ್ಲಿಗೆ ಬಂದ ಇಬ್ಬರು ಬಾಲಕರು ಆತನ ಬಳಿ ಭಿಕ್ಷೆಯನ್ನು ಬೇಡಿದ್ದು ಆತ ಭಿಕ್ಷೆ ಹಾಕದಿದ್ದುದಕ್ಕೆ ಬಾಲಕರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಬಾಲಕರ ಈ ವರ್ತನೆಗೆ ಸಿಟ್ಟಿಗೆದ್ದ ಸಂಜಯ್ ಅವರಲ್ಲಿ ಒಬ್ಬನ ಕೆನ್ನೆಗೆ ಬಾರಿಸಿದ್ದಾನೆ. ಇದರಿಂದ ಇಬ್ಬರೂ ಬಾಲಕರು ಆಕ್ರೋಶಗೊಂಡು ಅಲ್ಲಿಯೇ ಇದ್ದ ಬಿಯರ್ ಬಾಟಲ್‌ನಿಂದ ಒಬ್ಬ ಬಾಲಕ ಸಂಜಯ್ ತಲೆಗೆ ಹೊಡೆದಿದ್ದು ಅದೇ ಸಮಯದಲ್ಲಿ ಮತ್ತೊಬ್ಬ ಬಾಲಕ ಆ ಬಿಯರ್ ಬಾಟಲ್ ಎತ್ತಿಕೊಂಡು ಕುತ್ತಿಗೆಯನ್ನೇ ಕತ್ತರಿಸಿ ತಮ್ಮ ಕ್ರೌರ್ಯ ಪ್ರದರ್ಶಿಸಿದ್ದಾರೆ.
ಈ ಸಮಯದಲ್ಲಿ ಅಲ್ಲಿಂದ ಪಾರಾಗಲು ಸಂಜಯ್ ಯತ್ನಿಸಿದನಾದರೂ ಅಧಿಕ ಪ್ರಮಾಣದಲ್ಲಿ ರಕ್ತ ಸ್ರಾವವಾದುದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.