ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಆರ್ಥಿಕತೆಯ ಬಗ್ಗೆ 1 ಗಂಟೆಗಳ ಕಾಲ ಪಾಠ ತೆಗೆದುಕೊಂಡಿದ್ದಾರೆ- ಹೀಗಂತ ಹೇಳಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.
ನವದೆಹಲಿಯಲ್ಲಿ ಎನ್‌ಎಸ್‌ಯು ಐ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿ ಒಂದಾದ ಮೇಲೊಂದು ತಪ್ಪುಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ಮೇಕ್ ಇನ್ ಇಂಡಿಯಾ ಯೋಜನೆ ದೊಡ್ಡ ಸೊನ್ನೆ. ಬಡಜನರನ್ನು ಉದ್ಧಾರಗೊಳಿಸದೆ ಮೇಕ್ ಇನ್ ಇಂಡಿಯಾ ಯೋಜನೆ ಅಪೂರ್ಣ ಎಂದು ರಾಹುಲ್ ಕಿಡಿಕಾರಿದ್ದಾರೆ.
ಅದೇ ವೇಳೆ ಆರೆಸ್ಸೆಸ್ಸ್‌ನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ಈ ಮೊದಲು ವಿಜ್ಞಾನಿಗಳು ಸರ್ಕಾರಕ್ಕೆ ಸಲಹೆಗಳನ್ನು ಕೊಡುತ್ತಿದ್ದರು. ಈಗ ಅವರು ಆ ಕಾರ್ಯವನ್ನು ನಿಲ್ಲಿಸಿದ್ದಾರೆ. ಆರೆಸ್ಸೆಸ್ಸ್ ಈಗ ಶಿಕ್ಷಣ ಸಚಿವಾಲಯಕ್ಕೆ ಯೋಜನೆಗಳ ಬಗ್ಗೆ ಸಲಹೆ ನೀಡುತ್ತಿದೆ. ಆರೆಸ್ಸೆಸ್ ತುಂಬಾ ಶಿಸ್ತಿನ ಸಂಘಟನೆ. ಆರೆಸ್ಸ್‌ಸ್ಸ್ ಶಾಖೆಗಳಲ್ಲಿ ಎಲ್ಲರೂ ಒಂದೇ ಸಾಲಿನಲ್ಲಿ ನಿಂತಿರುತ್ತಾರೆ. ಅದರಲ್ಲಿ ಯಾರಾದರೂ ಸಾಲು ತಪ್ಪಿಸಿದರೆ, ಲಾಠಿಯಿಂದ ಏಟು ನೀಡಲಾಗುತ್ತದೆ.
ಕಾಂಗ್ರೆಸ್ ಪಕ್ಷಕ್ಕೆ ಒಳದನಿಯಿದೆ. ಆದರೆ ಬಿಜೆಪಿ ಭಾರತದ ಒಳದನಿಯನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.
ರೈತರ ಸಮಸ್ಯೆಗಳನ್ನು ಎತ್ತಿ ಹಿಡಿದು ಮೋದಿ ವಿರುದ್ಧ ವಾಗ್ದಾಳಿ ಮಾಡಿದ ರಾಹುಲ್, ಮೋದಿ ಮಂಗೋಲಿಯಾ, ಅಮೆರಿಕ ಭೇಟಿ ಮಾಡಿದ್ದಾರೆ. ಆದರೆ ಅವರಿಗೆ ರೈತರ ಮನೆಗಳಿಗೆ ಭೇಟಿ ಮಾಡಲು ಸಮಯವೇ ಸಿಗಲಿಲ್ಲ ಎಂದಿದ್ದಾರೆ.