ನವದೆಹಲಿ: ಜೀವಚ್ಛವವಾಗಿರುವವರಿಗೆ ದಯಾಮರಣ ಕೊಡಿ ಎಂದು ಕೋರ್ಟ್ ಮೊರೆ ಹೋದರೂ ಮನುಷ್ಯರಿಗೆ ದಯಾಮರಣ ಸಿಗುವುದಿಲ್ಲ. ಆದರೆ ಅದೆಷ್ಟೋ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಿಗೆ ನೆರವು ನೀಡಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಪ್ರಾಣಿಗಳು ಮಾತ್ರ ದಯಾಮರಣಕ್ಕೀಡಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ!.
ಬಾಂಬ್ ಇರುವಿಕೆಯನ್ನು ಪತ್ತೆ ಹಚ್ಚುವುದು, ಕ್ರಿಮಿನಲ್ ಗಳ ಚಲನೆಗಳನ್ನು ಪತ್ತೆ ಮಾಡುವುದು ಹೀಗೆ ವಿವಿಧ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ನಾಯಿಗಳು ಹಾಗೂ ಕುದುರೆಗಳನ್ನು ನಿವೃತ್ತಿಯ ಬಳಿಕ ನಿರ್ದಯವಾಗಿ ಸಾಯಿಸಲಾಗುತ್ತದೆ. ಅದೂ ದಯಾಮರಣದ ಹೆಸರಿನಲ್ಲಿ! ಆರ್.ಟಿ.ಐ ಅರ್ಜಿಯೊಂದಕ್ಕೆ ಸೇನೆ ನೀಡಿರುವ ಮಾಹಿತಿ ಪ್ರಕಾರ ಸೇನೆಯಲ್ಲಿ ಸೇವೆ ಸಲ್ಲಿಸಿದ ನಾಯಿಗಳು ಮತ್ತು ಕುದುರೆಗಳು ನಿವೃತ್ತಿ ಹೊಂದಿದ ಒಂದು ತಿಂಗಳ ಬಳಿಕ ಅವುಗಳಿಗೆ ದಯಾಮರಣ ನೀಡಲಾಗುತ್ತದೆ.
ಸೇನೆಯಲ್ಲಿರುವ ನಾಯಿ ಹಾಗೂ ಕುದುರೆಗಳನ್ನು ಫಿಟ್ನೆಸ್ ಟೆಸ್ಟ್ ಗೆ ಒಳಪಡಿಸುತ್ತಾರೆ, ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದಾದರೆ ನಿವೃತ್ತಿ ನೀಡಿ ಒಂದು ತಿಂಗಳ ನಂತರ ದಯಾಮರಣ ನೀಡಲಾಗುತ್ತದೆ. ವೃತ್ತಿ ಜೀವನದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿರುವುದರಿಂದ ನಿವೃತ್ತಿಯ ನಂತರ ಸಾಮಾನ್ಯ ನಾಗರಿಕರೊಂದಿಗೆ ಜೀವಿಸುವುದು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಸೇನೆಯಲ್ಲಿರುವ ಪ್ರಾಣಿಗಳಿಗೆ ದಯಾಮರಣ ನೀಡಲಾಗುತ್ತದೆ ಎಂದು ಸೇನೆ ಮಾಹಿತಿ ನೀಡಿದೆ.
ಭಾರತೀಯ ಸೇನೆಯ ಭದ್ರತಾ ಸೇವೆಗಳಿಗೆ ಜರ್ಮನ್ ಶೆಫರ್ಡ್ ಮತ್ತು ಬೆಲ್ಜಿಯನ್ ಶೆಫರ್ಡ್, ಲ್ಯಾಬ್ರಡಾರ್ ತಳಿಯ ನಾಯಿಗಳನ್ನು ನಿಯೋಜಿಸಲಾಗಿರುತ್ತದೆ. ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾದರೆ ಅವುಗಳಿಗೆ ದುಬಾರಿ ವೆಚ್ಚದ ಸೌಲಭ್ಯ ನೀಡಲಾಗುತ್ತದೆ. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದರಿಂದ ನಿವೃತ್ತಿಯ ನಂತರ ಸಾಮಾನ್ಯ ವಾತಾವರಣದಲ್ಲಿರಿಸುವುದು ಅಪಾಯಕಾರಿ ಆದ್ದರಿಂದ ಪ್ರಾಣಿಗಳಿಗೆ ನಿವೃತ್ತಿ ಬಳಿಕ ದಯಾಮರಣ ನೀಡುವುದಾಗಿ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೇನೆಯ ಈ ಕ್ರಮಕ್ಕೆ ಹಲವು ಪ್ರಾಣಿಪ್ರಿಯ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸಿದ ಪ್ರಾಣಿಗಳನ್ನು ಖಾಲಿಯಾದ ಸ್ಫೋಟಕಗಳನ್ನು ಎಸೆದಂತೆ ಎಸೆಯಲು ಸಾಧ್ಯವಿಲ್ಲ. ಆದರೂ ಪ್ರಾಣಿಗಳಿಗೆ ನಿವೃತ್ತಿ ನಂತರ ದಯಾಮರಣ ನೀಡುತ್ತಿರುವುದು ದುರದೃಷ್ಟಕರ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.