ಶ್ರೀನಗರ: ವಿದೇಶಕ್ಕೆ ತೆರಳಲು ಭಾರತೀಯ ಪಾಸ್ ಪೋರ್ಟ್ ಅಗತ್ಯವಿದೆ. ಆದರೆ ನಾನು ಹುಟ್ಟಿದ್ದು ಭಾರತದಲ್ಲಿ ಅಲ್ಲ ಎಂದು ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಶುಕ್ರವಾರ ಹೇಳಿದ್ದಾರೆ.
ಶ್ರೀನಗರದ ಪಾಸ್ ಪೋರ್ಟ್ ಕಚೇರಿಯಲ್ಲಿ ಪಾಸ್ ಪೋರ್ಟ್ ಅರ್ಜಿ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಗಿಲಾನಿ ಅವರು, ವಿದೇಶಕ್ಕೆ ಹೋಗಬೇಕಾದರೆ ನಮಗೆ ಭಾರತೀಯ ಪಾಸ್ ಪೋರ್ಟ್ ಅತ್ಯಂತ ಅವಶ್ಯವಾಗಿದೆ. ಪಾಸ್ ಪೋರ್ಟ್ ಅರ್ಜಿಯಲ್ಲಿ ಭಾರತದಲ್ಲಿ ಹುಟ್ಟಿದವರೆಂದು ನಮೂದಿಸಬೇಕಿದ್ದು, ಇದು ಕಡ್ಡಾಯವೆಂದು ಹೇಳಲಾಗಿದೆ. ಆದರೆ, ನಾನು ಭಾರತದಲ್ಲಿ ಹುಟ್ಟಿದವನಲ್ಲ, ವಿಭಜನ ಪೂರ್ವ ಭಾರತದಲ್ಲಿ ಹುಟ್ಟಿದವನು. ಆದ್ದರಿಂದ ಅರ್ಜಿಯಲ್ಲಿರುವ ಕೆಲವು ಮಾಹಿತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಪಾಸ್ ಪೋರ್ಟ್ ಪಡೆಯುವುದು ಪ್ರತಿಯೊಬ್ಬ ಭಾರತೀಯನ ಹಕ್ಕಾಗಿದ್ದು, ಅರ್ಹತೆಯ ಮೇರೆಗೆ ಅರ್ಜಿಯನ್ನು ಪರಿಗಣಿಸಲಾಗುತ್ತದೆ. ಗಿಲಾನಿ ಸಲ್ಲಿಸಿರುವ ಪಾಸ್ ಪೋರ್ಟ್ ಅರ್ಜಿಯಲ್ಲಿ ಅರ್ಜಿಯ ಶುಲ್ಕ, ಫೋಟೋ ಹಾಗೂ ಬಯೊಮೆಟ್ರಿಕ್ ವಿವರ ನೀಡಲಾಗಿದ್ದು, ಭಾರತೀಯರೆಂಬ ಕಾಲಂ ಒಂದನ್ನು ಖಾಲಿ ಬಿಟ್ಟಿದ್ದಾರೆ ಎಂದು ಸ್ಥಳೀಯ ಪಾಸ್ ಪೋರ್ಟ್ ಅಧಿಕಾರಿ ಹೇಳಿದ್ದಾರೆ.
ಅನಾರೋಗ್ಯದಿಂದ ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಪುತ್ರಿ ಫಾರ್ಹತ್ ಜಬೀನ್ ಗಿಲಾನಿಯನ್ನು ನೋಡುವ ಸಲುವಾಗಿ ಗಿಲಾನಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಗಿಲಾನಿ ಪಾಸ್ ಪೋರ್ಟ್ ವಿವಾದ ಜಮ್ಮು ಕಾಶ್ಮೀರದ ಮೈತ್ರಿ ಪಕ್ಷಗಳಾದ ಪಿಡಿಪಿ ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿತ್ತು. ಒಂದೆಡೆ ಪಿಡಿಪಿ ಇದೊಂದು ಮಾನವೀಯ ಸಮಸ್ಯೆಯಾಗಿದ್ದು, ಗಿಲಾನಿ ಪಾಸ್ ಪೋರ್ಟ್ ನೀಡಬೇಕು ಎಂದು ಹೇಳುತ್ತಿದ್ದರೆ. ಮತ್ತೊಂದೆಡೆ ಬಿಜೆಪಿ ಗಿಲಾನಿ ಅವರು ಮೊದಲು ಭಾರತದ ಕುರಿತಂತೆ ಪ್ರಮಾಣಿಕತೆಯನ್ನು ಪ್ರದರ್ಶಿಸಿ, ಸಂವಿಧಾನವನ್ನು ಒಪ್ಪಿಕೊಂಡು ನಂತರ ವಿದೇಶಕ್ಕೆ ಹಾರಲಿ ಎಂದು ವಿರೋಧ ವ್ಯಕ್ತಪಡಿಸಿತ್ತು.