ಎಟಿಎಂನಿಂದ ಹಣ ಕದಿಯುವ ಕುರಿತು ಕೇಳಿದ್ದೀರಿ. ಆದರೆ ಇಲ್ಲೊಂದು ಕಡೆ ಪ್ರಚಂಡ ಕಳ್ಳರು ಎಟಿಎಂ ಯಂತ್ರವನ್ನೇ ಕದ್ದೊಯ್ದ ಕುತೂಹಲಕಾರಿ ಘಟನೆ ನಡೆದಿದೆ.
ಹೌದು. ಪಠಾಣ್‌ಕೋಟ್‌ನ ಶರ್ಣಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾದ ಎಟಿಎಂ ಯಂತ್ರವನ್ನೇ ಕಳ್ಳರು ಬುಡ ಸಹಿತ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಳ್ಳರು ಕದ್ದೊಯ್ದಿರುವ ಎಟಿಎಂ ಯಂತ್ರದಲ್ಲಿ 3,70,700 ರೂಪಾಯಿಗಳ ನಗದು ಇದೆ ಎನ್ನಲಾಗಿದ್ದು ಕಳವು ನಡೆದ ಸಮಯದಲ್ಲಿ ಎಟಿಎಂ ನ ಭದ್ರತಾ ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ.
ಜನರ ಜಂಗುಳಿ ಇರುವ ಈ ಪ್ರದೇಶದಲ್ಲಿ ಕಳ್ಳರು ಎಟಿಎಂ ಹೊತ್ತೂಯ್ಯುವ ಮುನ್ನ ಒಳಗೆ ಹಾಗೂ ಹೊರಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಹಾಳು ಮಾಡಿದ್ದು ನಂತರ ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.