ನವದೆಹಲಿ: ಲಲಿತ್ ಮೋದಿ ವಿವಾದಕ್ಕೆ ಹೊಸತೊಂದು ತಿರುವು ಪಡೆದಿದೆ. ಭಾರತೀಯ ಅಧಿಕಾರಿಗಳಿಗೆ ನಾನು ನೀಡುತ್ತಿರುವ ಬೆಂಬಲ ಬಹಿರಂಗವಾಗಬಾರದು ಎನ್ನುವ ಷರತ್ತಿನ ಮೇಲೆ, ಕಳೆದ 2011ರಲ್ಲಿ ಲಲಿತ್ ಮೋದಿಯ ಇಂಗ್ಲೆಂಡ್ ವಲಸೆ ವೀಸಾ ಅರ್ಜಿಗೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ನೆರವು ನೀಡಿದ್ದರು ಎನ್ನುವ ಸ್ಫೋಟಕ ವರದಿ ಬಹಿರಂಗವಾಗಿದೆ.
ಲಲಿತ್ ಮೋದಿ ಪರ ವಕೀಲ ಮೆಹಮೂದ್ ಅಬ್ದಿ ಕಾರ್ಯನಿರ್ವಹಿಸುವ ಪಿಆರ್ ಫರ್ಮ್ ಸಂಸ್ಥೆ ಕಳುಹಿಸಿದ ಇ-ಮೇಲ್‌ಗಳಲ್ಲಿ ವಸುಂಧರಾ ರಾಜೇಯವರ ಸಾಕ್ಷಿ ಹೇಳಿಕೆಯಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ಸೋಮುವಾರದಂದು ಪತ್ರಿಕಾಗೋಷ್ಠಿ ನಡೆಸಿದ ಅಬ್ದಿ, ಹಿಂದಿನ ಯುಪಿಎ ಸರಕಾರದ ವರ್ತನೆಯಿಂದ ಲಲಿತ್ ಮೋದಿ ರೋಸಿ ಹೋಗಿದ್ದರು. ಯುಪಿಎ ಸರಕಾರ ಮೋದಿಯವರ ಭದ್ರತೆಯನ್ನು ತೆಗೆದುಹಾಕಿ ಅನಿವಾರ್ಯವಾಗಿ ದೇಶ ಬಿಟ್ಟು ಇಂಗ್ಲೆಂಡ್‌ಗೆ ತೆರಳುವಂತೆ ಒತ್ತಡ ಹೇರಿತ್ತು ಎಂದು ದಾಖಲೆಗಳನ್ನು ಬಿಡುಗಡೆಗೊಳಿಸಿದರು.
ಸಾಕ್ಷಿ ಹೇಳಿಕೆ ಪತ್ರದಲ್ಲಿ, ಲಲಿತ್ ಮೋದಿಗೆ ನೀಡುತ್ತಿರುವ ಬೆಂಬಲ ಭಾರತೀಯ ಅಧಿಕಾರಿಗಳಿಗಾಗಲಿ ಅಥವಾ ಸಾರ್ವಜನಿಕವಾಗಲಿ ಬಹಿರಂಗಪಡಿಸಬಾರದು ಎನ್ನುವ ಷರತ್ತಿನೊಂದಿಗೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಲಲಿತ್ ಮೋದಿ ಪ್ರಕರಣದಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷಗಳಿಗೆ ಇದೀಗ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಪ್ರಕರಣದಲ್ಲಿ ಸಿಲುಕಿರುವುದು ಮತ್ತಷ್ಟು ಸಂತಸ ತಂದಿದೆ.