ಛತ್ತರ್‌ಪುರ (ಮಧ್ಯಪ್ರದೇಶ), ಜೂ.17: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಗಣೇಶ್‌ಪುರ ಗ್ರಾಮದಲ್ಲಿ ಮೇಲ್ಜಾತಿಗೆ ಸೇರಿದ ಮಹಿಳೆಯರು ದಲಿತ ಬಾಲಕಿಯೋರ್ವಳಿಗೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ವರದಿಯಾಗಿದೆ. ಈ ಮಹಿಳೆಯರ ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬನ ಮೇಲೆ ಬಾಲಕಿಯ ನೆರಳು ಬಿತ್ತು ಎನ್ನುವ ಕಾರಣಕ್ಕೆ ಈ ಹಲ್ಲೆ ನಡೆದಿದೆ.
ಘಟನೆ ಜೂನ್ 13ರಂದು ನಡೆದಿದೆ ಹಾಗೂ ದೂರು ಕೂಡ ಅಂದೇ ಗಡಿ ಮಲ್ಹೇರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ನೀರಜ್ ಪಾಂಡೆ ತಿಳಿಸಿದರು. ಗ್ರಾಮದ ಕೈಪಂಪಿನಿಂದ ಬಾಲಕಿ ನೀರು ತರುತ್ತಿದ್ದಾಗ ಎದುರಿನಿಂದ ಬಂದ ಮೇಲ್ಜಾತಿಗೆ ಸೇರಿದ ಪುರಾನ್ ಯಾದವ್ ಎಂಬಾತನ ಮೇಲೆ ಬಾಲಕಿಯ ನೆರಳು ಬಿತ್ತು ಎಂಬ ಕಾರಣಕ್ಕೆ ಆಕ್ರಮಣ ನಡೆದಿದೆ ಎಂದು ಬಾಲಕಿಯ ತಂದೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
ದಲಿತ ಬಾಲಕಿಯ ನೆರಳು ತಮ್ಮ ಕುಟುಂಬಕ್ಕೆ ಸೇರಿದ ವ್ಯಕ್ತಿಯ ಮೇಲೆ ಬಿದ್ದ ಘಟನೆಯಿಂದ ಆಕ್ರೋಶಗೊಂಡ ಮಹಿಳೆಯರು ಬಾಲಕಿಯನ್ನು ತೀವ್ರವಾಗಿ ಥಳಿಸಿದರು ಹಾಗೂ ಇನ್ನೊಮ್ಮೆ ಕೈಪಂಪಿನ ಸಮೀಪ ಕಾಣಿಸಿಕೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಾಲಕಿ ಪೊಲೀಸ್ ಠಾಣೆಗೆ ಹೋಗುವುದನ್ನೂ ಯಾದವ್‌ನ ಕುಟುಂಬ ತಡೆಯಿತು. ಆದಾಗ್ಯೂ, ಬಾಲಕಿ ದುಷ್ಕರ್ಮಿಗಳ ಕಣ್ಣು ತಪ್ಪಿಸಿ ಪೊಲೀಸ್ ಠಾಣೆಗೆ ಹೋಗುವಲ್ಲಿ ಯಶಸ್ವಿಯಾದಳು.