ಹೊಸದಿಲ್ಲಿ: ಗೋಹತ್ಯೆ, ಗೋಮಾಂಸ ರಫ್ತು ನಿಷೇಧದ ನಂತರ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಪಠ್ಯಕ್ರಮದಲ್ಲಿ ಕಡ್ಡಾಯವಾಗಿರುವ ಮಾಂಸಾಹಾರ ಅಡುಗೆ ಕಲಿಕೆ ಐಚ್ಛಿಕ ವಿಷಯವಾಗಿಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ.
ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಪಠ್ಯಕ್ರಮದಲ್ಲಿ ಮಾಂಸಾಹಾರ ಸಿದ್ಧಪಡಿಸುವುದು ಕಡ್ಡವಾಗಿರುವುದರಿಂದ ಸಸ್ಯಹಾರಿಗಳು ಕೋರ್ಸ್ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಇದನ್ನು ಐಚ್ಛಿಕ ವಿಷಯವಾಗಿಸಬೇಕು ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹಾಗೂ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮ ಅವರಿಗೆ ಜವಳಿ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಬರೆದಿರುವ ಪತ್ರದಿಂದ ಹೊಸ ಚರ್ಚೆ ಆರಂಭವಾಗಿದೆ. ಸರಕಾರದ ಈ ಚಿಂತನೆ ಹೊಟೇಲ್ ಉದ್ಯಮದಲ್ಲಿ ಅಸಮಾಧಾನ ಹುಟ್ಟುಹಾಕುವ ಸಾಧ್ಯತೆ ಇದೆ.
ಅನಾಮಧೇಯ ಸಮೀಕ್ಷೆಯಂತೆ ದೇಶದ ಜನಸಂಖ್ಯೆಯಲ್ಲಿ ಸಸ್ಯಹಾರಿಗಳ ಸಂಖ್ಯೆ ಶೇ.40. ಈ ಅಂಕಿ ಅಂಶವನ್ನು ಆಧರಿಸಿ ತಮ್ಮ ವಾದ ಮಂದಿಟ್ಟಿರುವ ಗಂಗ್ವಾರ್, ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಪಠ್ಯಕ್ರಮದಲ್ಲಿ ಮಾಂಸಾಹಾರ ಸಿದ್ಧಪಡಿಸುವುದು ಕಡ್ಡವಾಗಿರುವುದರಿಂದ ಜೈನ, ಬ್ರಾಹ್ಮಣ ಹಾಗೂ ವೈಶ್ಯ ಸಮುದಾಯದ ವಿದ್ಯಾರ್ಥಿಗಳು ಕೋರ್ಸ್ ಸೇರುತ್ತಿಲ್ಲ ಎಂದಿದ್ದಾರೆ.
‘ನಾನು ಮಾಂಸಾಹಾರ ವಿರೋಧ ಅಲ್ಲ. ಆದರೆ, ಮಾಂಸಾಹಾರ ಸಿದ್ಧಪಡಿಸುವುದು ಐಚ್ಛಿಕ ವಿಷಯವಾಗಬೇಕು. ಸಸ್ಯಹಾರಿಗಳಿಗೆ ಇದು ಕಡ್ಡಾಯವಾಗಬಾರದು ಎಂಬುದಷ್ಟೇ ನನ್ನ ಮನವಿ. ಈ ವಿಷಯದ ಬಗ್ಗೆ ಚರ್ಚೆ ಆಗಬೇಕಿದ್ದು, ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು,’ ಎಂದು ಎಕಾನಾಮಿಕ್ಸ್ ಟೈಮ್ಸ್‌ಗೆ ಗಂಗ್ವಾರ್ ತಿಳಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಯುವ ಮೋರ್ಚಾದ ಮುಖ್ಯಸ್ಥ ಅನುರಾಗ್ ಠಾಕೂರ್ ಸಹ ಗಂಗ್ವಾರ್ ಆಗ್ರಹಕ್ಕೆ ದನಿಗೂಡಿಸಿದ್ದಾರೆ.
ಮಾಂಸಾಹಾರ ಸಿದ್ಧ ಪಡಿಸುವುದು ಕಡ್ಡಾಯಗೊಳಿಸಬಾರದು ಎಂದು Change.Org ಪೋರ್ಟಲ್‌ನಲ್ಲಿ ಪುಣೆ ಮೂಲದ ಚಾರ್ಟೆಡ್ ಅಕೌಟೆಂಟ್ ಸಿ.ಆರ್. ಲೂನಿಯಾ ಸಲ್ಲಿಸಿರುವ ಆನ್‌ಲೈನ್ ಅರ್ಜಿಗೆ 2,500 ಸಹಿ ಸಂಗ್ರಹವಾಗಿದೆ.