ಹೊಸದಿಲ್ಲಿ: ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆಗೆ ನಾಗರಿಕ ವಿಮಾನಯಾನ ಸಚಿವಾಲಯದ ಅನುಮೋದನೆ ದೊರೆತಿದೆ.
2014-15ರ ಅವಧಿಯಲ್ಲಿ ಇಂದಿರಾಗಾಂಧಿ ವಿಮಾನ ನಿಲ್ದಾಣ ಸುಮಾರು 4 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿದೆ. ಗ್ರೇಟರ್ ನೋಯ್ಡಾದ ಜೆವರ್‌ನಲ್ಲಿ ಸರಕಾರ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಅಲ್ಲೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಶೀಘ್ರದಲ್ಲೇ ಈ ಪ್ರಸ್ತಾವನೆಯನ್ನು ಕೇಂದ್ರ ಸಂಪುಟದ ಅನುಮೋದನೆಗೆ ಕಳುಹಿಸಲಾಗುವುದು ಎಂದು ನಾಗರಿಕ ವಿಮಾನಯಾನದ ಸಹಾಯಕ ಸಚಿವ ಮಹೇಶ್ ಶರ್ಮ ಗುರುವಾರ ತಿಳಿಸಿದ್ದಾರೆ.
ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಸರಕಾರ, ಕೆಲವು ನಿಯಮಗಳಿಗೆ ತಿದ್ದುಪಡಿ ತರಬೇಕಾಗುವುದು. ಹಾಲಿ ನಿಯಮದ ಪ್ರಕಾರ, ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ. ಸಾಮರ್ಥ್ಯ ಮೀರಿ ಕಾರ್ಯ ನಿರ್ಹಹಿಸುತ್ತಿದ್ದರೆ ಮಾತ್ರ ಒಂದೇ ಪ್ರದೇಶದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಅವಕಾಶವಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗ್ರೇಟರ್ ನೋಯ್ಡಾ 50 ಕಿ.ಮೀ.ದೂರದಲ್ಲಿದೆ.