ಲಂಡನ್, ಜೂ.26- ನೀತಿ-ನಿಯಮಾವಳಿಗಳನ್ನು ಬದಲಾಯಿಸುವಂತೆ ವಿಶ್ವದ ಎಲ್ಲ ಬ್ಯಾಂಕ್‌ಗಳಿಗೆ ಕರೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ರಘುರಾಮ್ ರಾಜನ್, ಸ್ವಲ್ಪ ಯಾಮಾರಿದರೂ ಜಾಗತಿಕ ಅರ್ಥ ವ್ಯವಸ್ಥೆ 1930ರ ದಶಕದಂತಹ ಮಹಾ ಕುಸಿತ ಕಾಣುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಸ್ಪರ್ಧಾತ್ಮಕ ಆರ್ಥಿಕ ನೀತಿಗಳನ್ನು ಸರಳಗೊಳಿಸುವುದರ ವಿರುದ್ಧ ಎಚ್ಚರಿಸಿರುವ ರಾಜನ್ ಅವರು, ಆದರೆ ಭಾರತದಲ್ಲಿನ ಪರಿಸ್ಥಿತಿಗಳು ಮಾತ್ರ ತೀರ ಭಿನ್ನವಾಗಿದ್ದು, ನಿರಖು (ಫಿಕ್ಸೆಡ್) ಠೇವಣಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಡ್ಡಿ ದರವನ್ನು ಕಡಿತಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಒಟ್ಟಾರೆ, ಅರ್ಥವ್ಯವಸ್ಥೆಯನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ, ನಿಜಕ್ಕೂ ಅಂತಾರಾಷ್ಟ್ರೀಯ ವಿತ್ತೀಯ ಸ್ಥಿತಿ-ಗತಿಗಳು 1930ರ ದಶಕದಲ್ಲಿ ಉಂಟಾಗಿದ್ದ ಕುಸಿತ ಅನುಭವಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಇದನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಒಮ್ಮತದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಒಂದು ಸೂಕ್ತ ಮಾರ್ಗೋಪಾಯವನ್ನು ನಾವು ಅನ್ವೇಷಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಅರ್ಥ ನೀತಿಗಳು ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ನಿರ್ಧರಿಸುವ ಕಾಲ ಸನ್ನಿಹಿತವಾಗಿದೆ. ಈ ಬಗ್ಗೆ ಕೇಂದ್ರೀಯ ಬ್ಯಾಂಕ್‌ಗಳು ಸರಿಯಾದ ಮಾರ್ಗವೊಂದನ್ನು ಕಂಡುಕೊಳ್ಳಬೇಕಾಗಿದೆ ಎಂದು ರಾಜನ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಲಹೆ ನೀಡಿದರು. ಕಳೆದ ರಾತ್ರಿ ಇಲ್ಲಿ ನಡೆದ ಲಂಡನ್ ಬಿಸಿನೆಸ್ ಸ್ಕೂಲ್ (ಎಲ್‌ಬಿಎಸ್)ನಲ್ಲಿ ನಡೆದ ಅಂತಾರಾಷ್ಟ್ರೀಯ ಅರ್ಥತಜ್ಞರ ಸಮಾವೇಶದಲ್ಲಿ ಈ ವಿಷಯ ತಿಳಿಸಿದ್ದಾರೆ.
ಯಾವ ರೀತಿ ಕಾನೂನು, ನೀತಿ-ನಿಯಮಾವಳಿಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ಸ್ವತಃ ನಾನೊಬ್ಬನೇ ಯಾವುದೇ ಸಲಹೆ ನೀಡಲು ಹೋಗುವುದಿಲ್ಲ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೇ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.