ನವದೆಹಲಿ; ವಿವಿಧ ಹಗರಣಗಳ ಸುಳಿಗೆ ಸಿಕ್ಕಿ ಹಾಕಿಕೊಂಡಿರುವ ಬಿಜೆಪಿಯ ನಾಲ್ವರು ಮಹಿಳಾ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ನವದೆಹಲಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು. ಈ ವಿಷಯದಲ್ಲಿ ಪ್ರಧಾನಿ ಮೋದಿಯವರು ನಿಷ್ಕ್ರಿಯತೆಯನ್ನು ವಿರೋಧಿಸಿ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದವು.
ಲಲಿತ ಮೋದಿಗೆ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ, ಚುನಾವಣೆ ಸಂದರ್ಭಧಲ್ಲಿ ತಮ್ಮ ವಿದ್ಯಾರ್ಹತೆಯ ಬಗ್ಗೆ ತಪ್ಪು ಮಾಹಿತಿ ನೀಡಿರುವ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹಾಗೂ 206 ಕೋಟಿ ರೂಪಾಯಿ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆ ತಕ್ಷಣಕ್ಕೆ ತಮ್ಮ ಸ್ಥಾನಗಳನ್ನು ತ್ಯಜಿಸಬೇಕು ಎಂದು ಆಪ್, ಕಾಂಗ್ರೆಸ್ ಒತ್ತಾಯಿಸಿವೆ.
“ದೇಶದಲ್ಲಿ ಸಾಮಾನ್ಯ ಜನರಿಗೊಂದು ಮತ್ತು ಬಿಜೆಪಿಯ ನಾಯಕರಿಗೊಂದು ಎಂಬಂತೆ ಎರಡು ಕಾನೂಗಳಿಲ್ಲ. ಹೀಗಾಗಿ ರಾಜೇ ಅವರು ಪದತ್ಯಾಗ ಮಾಡುವಂತೆ ಬಿಜೆಪಿ ನಾಯಕರು ಸೂಚಿಸಬೇಕು”, ಎಂದು ರಾಜಸ್ಥಾನ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಆಗ್ರಹಸಿದ್ದಾರೆ.
ಆದರೆ ತಮ್ಮ ಪಕ್ಷದ ಸಚಿವರ ರಾಜೀನಾಮೆ ಬೇಡಿಕೆಗಳನ್ನು ಬಿಜೆಪಿ ತಳ್ಳಿ ಹಾಕಿದೆ.
ಕಾಂಗ್ರೆಸ್, ಜಂತರ್ ಮಂತರ್ ಮತ್ತು ತನ್ನ ಪ್ರಧಾನ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಸ್ವರಾಜ್, ಇರಾನಿ ಮತ್ತು ರಾಜೇ ಪದತ್ಯಾಗಕ್ಕೆ ಒತ್ತಾಯಿಸಿತು .
ಆಪ್ ಕಾರ್ಯಕರ್ತರು ಇರಾನಿಯವರ ಮನೆಯ ಮುಂದೆ ಪ್ರತಿಭಟನೆ ನಡೆಸಿದರು.