ರಾಷ್ಟ್ರೀಯ

ಉಗ್ರರ ಭಯದ ನೆರಳಲ್ಲಿ ಕಲಿತ ಬಡ ಹುಡುಗ ಐಐಟಿಯಲ್ಲಿ 89ನೇ ರ್ಯಾಂಕ್ ಪಡೆದ!: ಪ್ರವೇಶ ಶುಲ್ಕ ಪಾವತಿ ಮಾಡಲು ಈತನ ಕೈಯಲ್ಲಿ ದುಡ್ಡಿಲ್ಲ

Pinterest LinkedIn Tumblr

ahammed-khureshiಶ್ರೀನಗರ: ಉಗ್ರರ ಗುಂಡು ತಾಗಿ ಅಪ್ಪ ಸಾಯುವಾಗ ಜಹೀದ್ ಅಹ್ಮದ್ ಖುರೇಷಿ ಎರಡು ತಿಂಗಳ ಕೂಸು. ಅಮ್ಮ ನ ಲಾಲನೆ ಪಾಲನೆಯಲ್ಲಿ ಬೆಳೆಯಬೇಕಿದ್ದ ಸಮಯದಲ್ಲಿ ಅಮ್ಮ ಎರಡನೇ ಮದುವೆಯಾದಳು. ಈ ಹೊತ್ತಲ್ಲಿ ಅಜ್ಜ ಮತ್ತು ಅಜ್ಜಿಯ ಆರೈಕೆಯಲ್ಲಿ ಖುರೇಷಿ ಬೆಳೆದದ್ದು. ಶಾಲೆಗೆ ಸೇರಿಸಲು ಅಜ್ಜ ಅಜ್ಜಿಯ ಕೈಯಲ್ಲಿ  ದುಡ್ಡು ಕೂಡಾ ಇರರಲಿಲ್ಲ. ಹಾಗಿದ್ದರೂ ಕಷ್ಟ ಪಟ್ಟು ಓದಿದ ಹುಡುಗ ಜಹೀದ್ ಅಹ್ಮದ್ ಖುರೇಷಿ ಈಗ 21 ವರ್ಷಗಳ ನಂತರ ಐಐಟಿ ಪ್ರವೇಶ ಪರೀಕ್ಷೆಯಲ್ಲಿ 89 ನೇ ರ್ಯಾಂಕ್ ಪಡೆದಿದ್ದಾನೆ. ಊರಿಗೂ, ಕುಟುಂಬಕ್ಕೂ ಹೆಮ್ಮೆ ತಂದ ಈ ಹುಡುಗನಿಗೆ ಈಗ ಮತ್ತೊಂದು ಕಷ್ಟ ಎದುರಾಗಿದೆ. ಅದೇನೆಂದರೆ ಇನ್ನು ಕಲಿಕೆಗೆ ಬೇಕಾದ ದುಡ್ಡು ಇವನಲ್ಲಿ ಇಲ್ಲ. ಅದನ್ನು ಹೊಂದಿಸುವುದು ಹೇಗೆ? ಎಂಬುದು ಇವರ ಪ್ರಶ್ನೆ

ಕೌನ್ಸಿಲಿಂಗ್ ಗೆ ಬೇಕಾದ 10,000 ರುಪಾಯಿ ಕೂಡಾ ನನ್ನ ಕೈಯಲ್ಲಿ ಇಲ್ಲ. ಆ ದುಡ್ಡು ಪಾವತಿ ಮಾಡದಿದ್ದರೆ ಅಡ್ಮಿಷನ್ ರದ್ದಾಗುತ್ತದೆ. ನನ್ನ ಕೈಯಲ್ಲಿರುವ ಫೋನ್ ಮಾರಿದರೂ ರು. 5000 ಅಷ್ಟೇ ಸಿಗುತ್ತದೆ ಎಂದು ಖುರೇಷಿ ಸಂಕಟವನ್ನು ತೋಡಿಕೊಳ್ಳುತ್ತಾನೆ.

ಇಲ್ಲಿನ ಕುಪ್‌ವಾರಾ ಜಲ್ಲೆಯ ದೂಡ್‌ವಾನ್ ಎಂಬ ಗ್ರಾಮದಲ್ಲಿ ಖುರೇಷಿ ಜನಿಸಿದ್ದು. 1995ರಲ್ಲಿ ಈತನ ಅಪ್ಪ ಫಾರೂಖ್ ಖುರೇಷಿ ಉಗ್ರರ ಗುಂಡು ತಗಲಿ ಸಾವನ್ನಪ್ಪಿದ್ದರು.

ಇದೀಗ ಮನೆಯ ಒಂದು ಕೋಣೆ ಬಾಡಿಗೆಗೆ ಕೊಟ್ಟಿದ್ದು, ಅಲ್ಲಿಂದ ಸಿಗುವ ದುಡ್ಡಷ್ಟೇ ಕುಟುಂಬದ ಆದಾಯ. ತನ್ನ ಮೊದಲ ಪ್ರಯತ್ನದಲ್ಲೇ ಖುರೇಷಿ ಈ ಪರೀಕ್ಷೆ ಪಾಸಾಗಿದ್ದಾರೆ. ವಿದ್ಯಾಭ್ಯಾಸ ಸಾಲಕ್ಕಾಗಿ ಬ್ಯಾಂಕ್‌ಗಳನ್ನು ಸಮೀಪಿಸಿದಾಗ ಅವರು ಅಡ್ಮಿಷನ್ ಆಗಿರುವ ದಾಖಲೆಗಳನ್ನು ತೋರಿಸಲು ಹೇಳಿದ್ದಾರೆ. ಕೌನ್ಸಿಲಿಂಗ್ ಶುಲ್ಕ ಪಾವತಿ ಮಾಡಿದರೆ ಮಾತ್ರ ಅಡ್ಮಿಷನ್ ಸಿಗುತ್ತದೆ. ಈಗ ನಿರೀಕ್ಷೆಗಳೆಲ್ಲಾ ಹುಸಿಯಾಗುತ್ತಿವೆ ಎಂಬ ದುಃಖದಿಂದ ಅಲ್ಲಿಯೇ ಇರುವ ಡಿಗ್ರಿ ಕಾಲೇಜಿಗೆ ಸೇರಲು ಖುರೇಷಿ ಸಿದ್ಧತೆ ನಡೆಸುತ್ತಿದ್ದಾನೆ.

Write A Comment