ಹೈದರಾಬಾದ್: ಈತ 20 ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕೆಂದು ತೆಲಂಗಾಣದ ಗ್ರಾಮವೊಂದರಿಂದ ನಗರಕ್ಕೆ ಬಂದವನು. ವಿಜ್ಞಾನ ಪದವಿ ಪೂರೈಸದೇ ಕಾಲೇಜನ್ನು ಅರ್ಧಕ್ಕೇ ಬಿಟ್ಟವನು. ಈಗ ಕೋಟ್ಯಾಧಿಪತಿ, ಸಿಂಗಾಪುರದ ಹೋಟೆಲ್ ನಲ್ಲಿ ಪಾಲುದಾರ, ಮಲ್ಲಾಪುರದಲ್ಲಿ ದೊಡ್ಡ ದೊಡ್ಡ ನಿವೇಶನ ಗಳ ಒಡೆಯ! ಅಷ್ಟೇ ಅಲ್ಲ, ಸದ್ಯಕ್ಕೆ ಪೊಲೀಸರ ಅತಿಥಿ.
ಈತ ಹೇಗೆ ಕೋಟ್ಯಾಧಿಪತಿಯಾದ ಎಂದು ಕೇಳುತ್ತೀರಾ? ಕಾಲೇಜು ಬಿಟ್ಟು ಕೆಮಿಕಲ್ ಕಾರ್ಖಾನೆಯೊಂದನ್ನು ಸೇರಿದ್ದ ರಮೇಶ್(34) ಅಲ್ಲಿಂದ ಕೆಲಸ ಬಿಟ್ಟ ನಂತರ ಆರಂಭಿಸಿದ್ದು ಅಮಲು ಪದಾರ್ಥ ತಯಾರಿಕಾ ಘಟಕವನ್ನು. ಕೆಮಿಸ್ಟ್ ತರಬೇತಿ ಪಡೆಯದಿದ್ದರೂ ರಮೇಶ್ ಮೆಥಂಫೆಟಮೈನ್ ಎಂಬ ಅಮಲು ಪದಾರ್ಥವನ್ನು ತಯಾರಿಸಲು ಕಲಿತಿದ್ದ.
ಈ ಮೇಥ್ ಅನ್ನು ಚೆನ್ನೈ ಮೂಲಕ ಸಿಂಗಾಪುರ ಮತ್ತು ಮಲೇಷ್ಯಾಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ. ಮೇಥ್ ಎನ್ನುವುದು ವಿಶ್ವದಲ್ಲೇ ಅತ್ಯಂತ ದುಬಾರಿ ಡ್ರಗ್. ಹೀಗಾಗಿ ರಮೇಶ್ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕೋಟಿಯ ಒಡೆಯನಾಗಿದ್ದ. ಈಗ ಸೈಬರಾಬಾದ್ ಪೊಲೀಸರ ವಿಶೇಷ ತನಿಖಾ ತಂಡವು ರಮೇಶ್ ನ ಗ್ಯಾಂಗ್ ಮೇಲೆ ಏಕಾಏಕಿ ದಾಳಿ ಮಾಡಿದೆ.
ಈ ಸಮಯದಲ್ಲಿ ಅವರು 13.5 ಕೆಜಿ ಮೆಥಂಫೆಟಮೈನ್ ಅನ್ನು ಚೆನ್ನೈಗೆ ಸಾಗಿಸಲು ಯತ್ನಿಸುತ್ತಿದ್ದರು. ‘ಈತನನ್ನು ಬಂಧಿಸಿದ ಬಳಿಕವೇ ನಮಗೆ ಈತ ಕೋಟ್ಯಾಧಿಪತಿ ಎಂದು ಗೊತ್ತಾಗಿದ್ದು’ ಎಂದಿದ್ದಾರೆ ಇನ್ ಸ್ಪೆಕ್ಟರ್ ನರಸಿಂಹ ರಾವ್. ಬಹುಕೋಟಿಯ ಅಮಲು ಪದಾರ್ಥ ಮಾರಿ ದಿಢೀರನೆ ಕುಬೇರನಾಗಿದ್ದ ರಮೇಶ್ ಈಗ ಪೊಲೀಸರ ಅತಿಥಿಯಾಗಿದ್ದಾನೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.