ರಾಷ್ಟ್ರೀಯ

ರೈಲು ನಿಲ್ದಾಣದಲ್ಲಿ ಮೂತ್ರಿಸಿದ 109 ಮಂದಿಯನ್ನು ಜೈಲಿಗಟ್ಟಿದ ಪೊಲೀಸರು

Pinterest LinkedIn Tumblr

railway

ಆಗ್ರಾ: ಇದು ಅಭೂತಪೂರ್ವ ‘ಸ್ವಚ್ಛ ಭಾರತ’ ಆಂದೋಲನ. ರೈಲು ನಿಲ್ದಾಣದಲ್ಲಿ ಎಲ್ಲಿ ಬೇಕೆಂದರಲ್ಲಿ ದೇಹಬಾಧೆ ತೀರಿಸುತ್ತಿದ್ದ 109 ಮಂದಿಯನ್ನು ಆಗ್ರಾ ವಿಭಾಗೀಯ ರೈಲ್ವೇ ಪೊಲೀಸರು ಜೈಲಿಗಟ್ಟಿದ್ದಾರೆ.

ಪ್ಲ್ಯಾಟ್‌ಫಾರ್ಮ್ ಪಕ್ಕದಲ್ಲಿ, ರೈಲು ಹಳಿಯ ಮೇಲೆ, ಗೋಡೆಗಳಿಗೆ, ಪಾರ್ಕಿಂಗ್ ಸ್ಥಳ ಮುಂತಾದಲ್ಲೆಲ್ಲಾ ಮೂತ್ರ ವಿಸರ್ಜನೆ ಮಾಡುತ್ತಿದ್ದ 109 ಮಂದಿಯನ್ನು 24 ಗಂಟೆಗಳ ಕಾಲ ಬಂಧನದಲ್ಲಿಟ್ಟು, ಅವರವರ ‘ಅಪರಾಧ’ದ ಗಂಭೀರತೆಗೆ ಅನುಗುಣವಾಗಿ 100ರಿಂದ 500 ರೂ.ವರೆಗೆ ದಂಡ ವಿಧಿಸಲಾಗಿದೆ.

ರೈಲು ನಿಲ್ದಾಣಗಳ ಪ್ರತಿಯೊಂದು ಮೂಲೆಯಲ್ಲಿಯೂ ಮೂತ್ರದ ದುರ್ವಾಸನೆ, ಪಾನ್ ಜಗಿದು ಉಗುಳುವಿಕೆ ಮುಂತಾದವುಗಳನ್ನು ನೋಡಿ ರೋಸಿ ಹೋದ ರೈಲ್ವೇ ಪೊಲೀಸ್ ಇಲಾಖೆಯ ಅಧಿಕಾರಿ ಗೋಪೇಶ್‌ನಾಥ್ ಖನ್ನಾ, ಇಂತಹಾ ‘ದುಷ್ಕರ್ಮಿ’ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸುವಂತೆ ಕಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

48 ಗಂಟೆಗಳ ಅವಧಿಯಲ್ಲಿ ಆಗ್ರಾ ವಿಭಾಗದ 12 ರೈಲು ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದವರನ್ನು ಎಳೆದು ತಂದು ಜೈಲಿಗಟ್ಟಿದ್ದಾರೆ. ಆಲ್ಕೋಹಾಲ್ ಸೇವನೆ, ಪಾನ್ ಮಸಾಲ ಜಗಿದು ಉಗುಳುವುದು ಹಾಗೂ ಮೂತ್ರ ವಿಸರ್ಜಿಸುವುದು – ಇವುಗಳಿಗೆ ಸಂಬಂಧಿಸಿದಂತೆ ಬಂಧಿತರಿಗೆ ಅವರವರ ‘ಅರ್ಹತೆ’ಯ ಆಧಾರದಲ್ಲಿ ದಂಡವನ್ನೂ ವಿಧಿಸಲಾಗಿದೆ.

ಇದು ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ವಚ್ಛ ಭಾರತ’ ಅಭಿಯಾನದ ಭಾಗ. ಪೊಲೀಸ್ ಕಾಯ್ದೆಯ 34ನೇ ವಿಭಾಗದ ಅನುಸಾರ (ಸಾರ್ವಜನಿಕ ಸ್ಥಳಗಳು, ರಸ್ತೆಗಳಲ್ಲಿ ಪ್ರಯಾಣಿಕರಿಗೆ ಅಥವಾ ಅಲ್ಲಿರುವವರಿಗೆ ತೊಂದರೆ ಉಂಟುಮಾಡುವ ಅಪರಾಧಕ್ಕೆ ಶಿಕ್ಷೆ) ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸಧಿಕಾರಿ ಖನ್ನಾ ವಿವರಿಸಿದ್ದಾರೆ.

Write A Comment